ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯುವ ಪ್ರಸಂಗಕರ್ತರು ಮಿಥುನ್ ಪೂಜಾರಿ ಕೋಣಿ

Posted On: 17-09-2020 09:58PM

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಗೋಪಾಲ ಪೂಜಾರಿ ಮತ್ತು ಪ್ರೇಮಾ ಪೂಜಾರಿ ದಂಪತಿಗಳ ನಾಲ್ಕು ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿ , ಮೇಘರಾಜ್ ಇವರ ತಮ್ಮನಾಗಿ , ನವ್ಯ ಮತ್ತು ಕಾವ್ಯ ರಿಗೆ ಅಣ್ಣನಾಗಿ ಸಪ್ಟೆಂಬರ್ ೨೩ ರ ೧೯೯೫ ರಂದು ಜನಿಸಿದರು.

ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ದಲ್ಲಿ , ಪ್ರೌಢ ಶಿಕ್ಷಣವನ್ನು ಸೈಂಟ್ ಮೇರಿಸ್ ಪ್ರೌಢ ಶಾಲೆ ಕುಂದಾಪುರ ದಲ್ಲಿ ವ್ಯಾಸಾಂಗ ಮಾಡಿ , ಪಿಯುಸಿ ಶಿಕ್ಷಣವನ್ನು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು ಕುಂದಾಪುರದಲ್ಲಿ ಅಧ್ಯಯನ ಮಾಡಿ , ಬಿ.ಎ ಪದವಿಯನ್ನು ಶ್ರೀ ಶಾರದಾ ಕಾಲೇಜು ಬಸ್ರೂರು ವಿನಲ್ಲಿ ಸಂಪೂರ್ಣಗೊಳಿಸಿರುತ್ತಾರೆ.

ರಾಜು ಪೂಜಾರಿ ಹೆಮ್ಮಾಡಿ , ಕಲಾವಿದರು ಶ್ರೀ ಕ್ಷೇತ್ರ ಹಾಲಾಡಿ ಮೇಳ ಇವರ ಪ್ರೇರಣೆ ಮತ್ತು ಸಲಹೆಯೊಂದಿಗೆ ಪ್ರಸಂಗ ಬರೆಯಲು ಒಲವು ತೋರಿದ ಇವರು ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಮತ್ತು ಯಕ್ಷಕವಿ ಯಕ್ಷಾನಂದಾ ಬಿಲ್ಲವ ಕುತ್ಪಾಡಿ ಇವರನ್ನು ಗುರುಗಳನ್ನಾಗಿ ಸ್ವೀಕರಸಿಕೊಂಡರು.

ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಇವರ ಪದ್ಯ ರಚನೆಯಲ್ಲಿ " ದೇವ ಸ್ವರೂಪ " ಪ್ರಸಂಗ ಶ್ರೀ ಕ್ಷೇತ್ರ ಹಿರಿಯಡಕ ಮೇಳದಲ್ಲಿ ಮತ್ತು " ಧರ್ಮದೇವತೆ ಚಿಕ್ಕಮ್ಮ " ಹಾಗೂ " ಶ್ರೀ ದೇವಿ ಭದ್ರಮಹಂಕಾಳಿ " ಪ್ರಸಂಗ ಶ್ರೀ ಕ್ಷೇತ್ರ ಮಡಾಮಕ್ಕಿ ಮೇಳದಲ್ಲಿ ಹಾಗೂ ೨೦೧೮ - ೨೦೨೦ ನೇ ಸಾಲಿನ ಶ್ರೀ ಕ್ಷೇತ್ರ ಸೌಕೂರು ಮೇಳದ ತಿರುಗಾಟದಲ್ಲಿ ಯಕ್ಷಕವಿ ಯಕ್ಷನಂದಾ ಬಿಲ್ಲವ ಕುತ್ಪಾಡಿ ಇವರ ಪದ್ಯ ರಚನೆಯಲ್ಲಿ " ಧರ್ಮ ಸಂಕಲ್ಪ " ಪ್ರಸಂಗ ಪ್ರದರ್ಶನಗೊಂಡಿರುತ್ತದೆ. ಇವರ " ಧರ್ಮದೇವತೆ ಚಿಕ್ಕಮ್ಮ " ಪ್ರಸಂಗವು ೭೫ಕ್ಕೂ ಹೆಚ್ಚು ಪ್ರದರ್ಶನಗೊಂಡು ಜನಮನ್ನಣೆಗೊಂಡಿರುತ್ತದೆ.
೨೦೨೦ - ೨೦೨೧ ನೇ ಸಾಲಿನ ತಿರುಗಾಟಕ್ಕೆ ಇವರ ಪಂಚಮ ಕಲಾಕುಸುಮ " ಶ್ರೀ ಅಗ್ನಿ ದುರ್ಗಾಪರಮೇಶ್ವರೀ ಕ್ಷೇತ್ರ ಮಹಾತ್ಮೆ " ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಇವರ ಪದ್ಯ ರಚನೆಯಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಮೇಳವೊಂದರಲ್ಲಿ ವಿಜ್ರಂಬಿಸಲಿಕ್ಕಿದೆ.
ಯುವ ಪ್ರಸಂಗಕರ್ತರಿಗೆ ಎಂ.ಜಿ.ಎಫ್ ಫ್ರೆಂಡ್ಸ್ ಬಗ್ವಾಡಿ ಇವರು ನೀಡುವ ಎಂ‌.ಜಿ.ಎಫ್ ಪ್ರಶಸ್ತಿ , ಯಕ್ಷಾಭಿಮಾನಿ ಬಳಗ ಕೋಣಿ ಇವರಿಂದ ಸನ್ಮಾನ , ಯಕ್ಷ ಮೃದಂಗ ಮಹಾಲಕ್ಷ್ಮೀ ಲೇಔಟ್ ಬೆಂಗಳೂರು ಇವರಿಂದ ಪುರಸ್ಕಾರ ಮತ್ತು ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಇವರಿಂದ ಪುರಸ್ಕಾರವನ್ನು ಪಡೆದ ಇವರು ಎಲ್ಲರ ಪ್ರೀತಿ ಪಾತ್ರಕ್ಕೆ ಭಾಜನರಾಗಿರುತ್ತಾರೆ.
ಪ್ರಸ್ತುತ ಇವರು ಎಚ್.ಡಿ.ಬಿ ಫೈನಾನ್ಸ್ ಕಂಪೆನಿ ಉಡುಪಿ ಇಲ್ಲಿ ಉದ್ಯೋಗದಲ್ಲಿ ನಿಯೋಜಿತಗೊಂಡಿರುತ್ತಾರೆ.
ಇಂತಹ ಯುವ ಪ್ರಸಂಗಕರ್ತರಿಂದ ಇನ್ನಷ್ಟು ಕಲಾಕುಸುಮಗಳು ಯಕ್ಷರಂಗದಲ್ಲಿ ರಾರಾಜಿಸಲಿ ಮತ್ತು ಇನ್ನೂ ಅನೇಕ ಪ್ರಶಸ್ತಿ , ಪುರಸ್ಕಾರಗಳು ನಿಮ್ಮದಾಗಲಿ ಮತ್ತು ನೀವು ಮಾಡುವ ಕೆಲಸದಲ್ಲಿ ಸುಖ , ಶಾಂತಿ , ನೆಮ್ಮದಿ ಮತ್ತು ಯಶಸ್ಸನ್ನು ಒದಗಿಸು ಎಂದು ಸಿಗಂದೂರು ಶ್ರೀ ಚೌಡೇಶ್ವರೀ ಅಮ್ಮನವರಲ್ಲಿ ಮತ್ತು ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಾ ಶುಭ ಹಾರೈಸೋಣ.
ಧನ್ಯವಾದಗಳೊಂದಿಗೆ.