ಒಂದು ಸೀಯಾಳಕ್ಕೆ ಜೀವ ಉಳಿಸುವ ಎಲ್ಲೂರು ಸೀಮೆಯ ಒಡೆಯ ವಿಶ್ವೇಶ್ವರ
Posted On:
18-09-2020 10:39PM
ಎಳೆದೇರನಿಗೆ ಎಳನೀರ ಕಾಣಿಕೆ
ಎಲ್ಲೂರಿನ ಎಳೆದೇರ ( ಶಿವ ) ನಿಗೆ ಎಳನೀರಿಗಿಂತ ಪ್ರಿಯವಾದುದು ಮತ್ತೊಂದಿಲ್ಲ!
ಬಡವ , ಬಲ್ಲಿದ ಭೇದವಿಲ್ಲದೆ ಭಕ್ತರೆಲ್ಲರೂ ಅರ್ಪಿಸುವ ಎಳನೀರಿನ ಮೇಲೆ ವಿಶ್ವನಾಥನಿಗೆ ವಿಶೇಷ ಮೋಹ . ಆದುದರಿಂದಲೇ ವಾರವೊಂದಕ್ಕೆ ಕನಿಷ್ಠ 2000 ಎಳನೀರು ರುದ್ರನಿಗೆ ಅಭಿಷೇಕವಾಗುತ್ತದೆ.
ದೇವಳದ ಪರಿಸರದಲ್ಲಿ ಯಾರೂ ಎಳನೀರು ಕುಡಿಯಲಾರರು.
ಪಕ್ಕದ ಅಂಗಡಿಯವರು ಭಕ್ತರಿಗಾಗಿ ಮಾರಾಟಕ್ಕಿಟ್ಟಿರುವ ಎಳನೀರಿನ ರಾಶಿಯನ್ನು ಹಾಗೆಯೇ ಬಿಟ್ಟು ಅಂಗಡಿಗೆ ಬಾಗಿಲು ಹಾಕಿ ಹೋಗುತ್ತಾರೆ. ಒಂದೇ ಒಂದು ಎಳನೀರನ್ನು ಕೂಡ ಯಾರೂ ಮುಟ್ಟಲಾರರು. ಈಗ ಪ್ರತಿದಿನ ಸುಮಾರು ಒಂದು ಸಾವಿರ ಎಳನೀರು ಅಭಿಷೇಕವಾಗುತ್ತದೆ.
ಎಳನೀರಿಗೆ ಸಂಬಂಧಿಸಿದ ಹಲವು ಕತೆಗಳು ಈ ಊರಲ್ಲಿ ಜನಜನಿತವಾಗಿವೆ. ಅವುಗಳಲ್ಲಿ ಇದೂ ಒಂದು : ಬ್ರಿಟಿಷ್ ಅಧಿಕಾರಿಯೊಬ್ಬ ಕ್ಷೇತ್ರಕ್ಕೆ ಆಗಮಿಸಿ ಎಳನೀರಿನ ರಾಶಿಯನ್ನು ಕಂಡು ಕುಡಿಯುವ ಮನ ಮಾಡುತ್ತಾನೆ . ಸ್ಥಳೀಯರು ಈ ಪರಿಸರದಲ್ಲಿ ಎಳನೀರು ಕುಡಿಯುವಂತಿಲ್ಲವೆಂದು ಹೇಳಿದರೂ ಕೂಡ ಅಧಿಕಾರಿ ದರ್ಪದಿಂದ ಕೆತ್ತಿ ಕೊಡುವಂತೆ ಸೂಚಿಸುತ್ತಾನೆ. ಎಳನೀರು ಕುಡಿದೊಡನೆ ದೊಪ್ಪನೆ ಬಿದ್ದು ನಾಲಗೆ ಹೊರಗೆ ಚಾಚಿ ಪ್ರಜ್ಞಾಹೀನನಾಗುತ್ತಾನೆ.
ಅಧಿಕಾರಿಯ ಕೈಯಲ್ಲೇ ತಪ್ಪು ಕಾಣಿಕೆಯಾಗಿ 100 ಸೀಯಾಳ ಸನ್ನಿಧಾನಕ್ಕೆ ಹಾಕಿಸುತ್ತೇವೆ ಎಂದು ಸ್ಥಳೀಯರು ಪ್ರಾರ್ಥಿಸಿದಾಗ ಅಧಿಕಾರಿ ಎದ್ದು ಕುಳಿತನಂತೆ!
ಇಂದಿನ ದಿನಗಳಲ್ಲಿ ಇಂಥ ಕತೆಗಳನ್ನು ನಂಬುವವರು ಇರಬಹುದು , ಇಲ್ಲದೆಯೂ ಇರಬಹುದು . ಇದೇನಿದ್ದರೂ ಇಂದಿಗೂ ಈ ಪರಿಸರದಲ್ಲಿ ಯಾರೂ ಎಳನೀರು ಕುಡಿಯುವುದಿಲ್ಲ , ತೆಂಗಿನ ಗಿಡದ ಪ್ರಥಮ ಫಲ ( ಸೀಯಾಳ ) , ತೆಂಗಿನ ತೋಟಗಳಿಗೆ ಇಲಿ ಕಾಟ , ಹಲವು ಮಾರಣಾಂತಿಕ ಆಸೌಖ್ಯ , ಕಾರ್ಯಸಾಧನೆ ಮುಂತಾದ ಇಷ್ಟಾರ್ಥಸಿದ್ದಿಗೆ ಇಲ್ಲಿ ಎಳನೀರು ಅರ್ಪಿಸುವುದು ಅಥವಾ 100 , 1000 ಹೀಗೆ ಶಕ್ತ್ಯಾನುಸಾರ ಸಂಖ್ಯೆಯಲ್ಲಿ ಅಭಿಷೇಕ ಮಾಡಿಸುವುದು ನಡೆಯುತ್ತದೆ . ಎಳನೀರಿನಲ್ಲಿ ತುಲಾಭಾರ ಹೆಚ್ಚಿನ ಸಂಖ್ಯೆಯಲ್ಲಿ ನೆರವೇರುತ್ತದೆ.
ಸ್ವಯಂಭು ' ವಿಶ್ವನಾಥನು ಉದ್ಭವಿಸುವ ವೇಳೆ ಗಿರಿಜನ ವೃದ್ಧ ಮಹಿಳೆಯ ಕತ್ತಿಯ ಆಘಾತ ಲಿಂಗದ ಮೇಲೆ ಬಿದ್ದು ರಕ್ತ ಹರಿಯಲಾರಂಭಿಸಿತು . ಎಳನೀರಿನ ಎರೆಯುವಿಕೆಯಿಂದ ರಕ್ತ ಹರಿಯುವಿಕೆ ನಿಂತಿತು ಎಂಬ ಕತೆಯನ್ನು ಹೇಳುವ ಈ ಪ್ರದೇಶದ ( ಸೀಮೆಯ ) ಹಿರಿಯರು ಈ ಕಾರಣದಿಂದ ಉಳ್ಳಾಯನಿಗೆ ಎಳನೀರು ಅಪೂರ್ವವಾದ ಸೇವಾ ವಸ್ತುವಾಯಿತೆನ್ನುತ್ತಾರೆ . ಸುಲಭ ಲಭ್ಯ ಎಳನೀರು ಬಡವನೂ ಅರ್ಪಿಸಬಹುದಾದದ್ದು . ಹೀಗಾಗಿ ಸಕಲ ವೈಭವಯುಕ್ತನಾದ ಎಲ್ಲೂರು ವಿಶ್ವನಾಥನು ಅಲ್ಪಮೌಲ್ಯದ ಎಳನೀರಿನ ಸೇವೆಗೆ ಆಕ್ಷಯ ಫಲ ಅನುಗ್ರಹಿಸುವನೆಂಬುದು ನಂಬಿಕೆ.
ಬರಹ : ಕೆ ಎಲ್ ಕುಂಡಂತಾಯ