ನವರಾತ್ರಿ ಅಮ್ಮನ ಆರಾಧನೆ
Posted On:
19-09-2020 12:46PM
'ಪಿತೃಪಕ್ಷ' - ಮಹಾಲಯ ಪಕ್ಷವು ಮಹಾಲಯ ಅಮಾವಾಸ್ಯೆಯೊಂದಿಗೆ ಮುಗಿದೊಡನೆ , ಶುದ್ಧ ಪಾಡ್ಯದಿಂದ "ಮಾತೃಪಕ್ಷ".
ಮಾತೃಪಕ್ಷವೇ 'ನವರಾತ್ರಿ'
ಇದೀಗ ಅಧಿಕ ಮಾಸದಲ್ಲಿ ಒದಗಿದ ನವರಾತ್ರಿ . ಈ ವರ್ಷ ಎರಡುಬಾರಿ ನವರಾತ್ರಿ ಆಚರಣೆಗೆ ಅವಕಾಶ.
ಆದರೆ ಭಾರತೀಯರಾದ ನಮಗೆ ಹೇಗೆ ಕೋಟ್ಯಂತರ ದೇವಾನುದೇವತೆಗಳನ್ನು ಗೊಂದಲಗಳಿಲ್ಲದೆ ಆರಾಧಿಸುವ ಮನಃಸ್ಥಿತಿ ಇದೆಯೋ ಹಾಗೆಯೇ ಪರ್ವವೊಂದು ಎರಡು ಬಾರಿ ಸನ್ನಿಹಿತವಾದರೂ ದೇವರ ಉಪಾಸನೆಗೆ ಪ್ರಾಪ್ತಿಯಾದ ಹೆಚ್ಚುವರಿ ಅವಕಾಶ ಎಂದು ತಿಳಿಯುವವರು .ಇದು ಭಾರತೀಯ ತತ್ತ್ವಜ್ಞಾನ.
ಪ್ರಸಿದ್ಧ ದುರ್ಗಾಲಯಗಳಲ್ಲಿ ಕೆಲವೆಡೆ ವಿಜೃಂಭಣೆಯಿಂದ ,ಇನ್ನು ಹಲವೆಡೆ ಪೂಜಾದಿಗಳಿಗೆ ಸೀಮಿತವಾಗಿ 'ಅಧಿಕ ನವರಾತ್ರಿ'ಯೂ ಆಚರಿಸಲ್ಪಡುತ್ತಿದೆ.
'ನವರಾತ್ರಿ' ರಮೋತ್ಸವ . "ರಮಾ" ಅಂದರೆ ಲಕ್ಷ್ಮೀ ,ಶೋಭೆ , ಸಮೃದ್ಧಿ ಎಂಬುದು ಅರ್ಥ .ಪ್ರಕೃತಿ ಕೃಷಿ - ಬೆಳೆಯ ಅತಿಶಯತೆಯಿಂದ , ಫಲ ಸಮೃದ್ಧಿಯಿಂದ ತುಂಬಿ ತುಳುಕುವ ಪರ್ವಕಾಲ . ಇದು ಲಕ್ಷ್ಮೀ ,ಸಂಪತ್ತಿಗೆ ಕಾರಣವಾಗಬಹುದಾದ ಪರಿಸರವಲ್ಲವೇ ? ಇದೇ ಅಲ್ಲವೇ ಸಂಭ್ರಮದ ಸುಮುಹೂರ್ತ.
ಒಂಬತ್ತು ದಿನಗಳ ಉತ್ಸವ ,ಹತ್ತನೇ ದಿನದ ಸಮಾರೋಪ ಅವಭೃತ .ಒಟ್ಟು ಹತ್ತು ದಿನಗಳ ಈ ಸಂದರ್ಭ ದಶ + ಆಹರಾ = 'ದಸರಾ' ಎಂದೇ ಪ್ರಸಿದ್ಧ , ವಿಜಯದಶಮಿ ಎಂದೇ ಆಚರಣೆ .
ಒಂದು ವರ್ಷದಲ್ಲಿ ನಾಲ್ಕು ನವರಾತ್ರಿಗಳು ಬರುತ್ತವೆ .ವಸಂತ ಋತು , ಗ್ರೀಷ್ಮ ಋತು ,ಶರದೃತು ,ಹೇಮಂತ ಋತುಗಳಲ್ಲಿ ನವರಾತ್ರಿ ನೆರವೇರುತ್ತಿತ್ತು .ಈ ಋತುಗಳೆಂದರೆ ಪ್ರಕೃತಿಯಲ್ಲಿ ಸಂಭವಿಸುವ ಹವಾಮಾನದ ಬದಲಾವಣೆಗಳನ್ಮು ಸೂಚಿಸುತ್ತಾ ಅನುಕ್ರಮವಾಗಿ ಮರಗಿಡಗಳು ಹೂ ಬಿಡುವ , ಮಳೆಯ ಆರಂಭ ಮತ್ತು ಬೆಳೆಬೆಳೆದು ಪೊಲಿ - ಸಮೃದ್ಧಿಯು ಪ್ರಕೃತಿಯಲ್ಲಿ ದರ್ಶನವಾಗುವ ಕಾಲಗಳಾಗಿವೆ.
ಹೀಗೆ ಪ್ರಕೃತಿಯೊಂದಿಗೆ ಸಂವಾದಿಗಳಾಗುತ್ತಾ , ಪ್ರಕೃತಿಯ ಸ್ಥಿತ್ಯಂತರಗಳನ್ನು ಗಮನಿಸುತ್ತಾ ಬದುಕು ಕಟ್ಟಿದ ಮಾನವ. ಆತನಿಗೆ ಇಂತಹ ಸಂದರ್ಭಗಳೇ ಆಚರಣೆಗಳಾದುವು ."ಮಾತೃ - ಪ್ರಕೃತಿ - ಶಕ್ತಿ" ಸಂಬಂಧವು ಇದೇ ಸಿದ್ಧಾಂತದಿಂದ , ಅನುಭವ ಅಥವಾ ಪ್ರಕೃತಿಯ ಸಾಕ್ಷಾತ್ಕಾರದಿಂದ ಪ್ರಾಪ್ತಿಯಾಯಿತು ಅನ್ನೋಣವೇ ?
ಬರಹ : ಕೆ.ಎಲ್.ಕುಂಡಂತಾಯ