ಕುಂಜೂರು ದೇವಳ ಜಲಾವೃತ ನೆರೆನೀರು ನೆನಪಿಸಿದ ಪುರಾಣ
Posted On:
20-09-2020 03:37PM
ಇಂತಹ ಸತತ ಮಳೆ ಸುರಿಯುವ ಸಂದರ್ಭಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀದುರ್ಗಾ ದೇವಸ್ಥಾನವು ನೆರೆ ನೀರು ಏರಿ ಜಲಾವೃತವಾಗುವುದು ಸಹಜ .
ದೇವಳದ ಒಳಾಂಗಣದಲ್ಲಿ ಒಂದು ಅಡಿಯಷ್ಟು ನೀರು ತುಂಬಿದರೆ , ಹೊರ ಅಂಗಣದಲ್ಲಿ ಮೂರು ಅಡಿ ಎತ್ತರಕ್ಕೆ ನೀರು.
ಇಂತಹ ನಿರಂತರ ಮಳೆ ಸುರಿಯುವ ವೇಳೆ ನಮ್ಮ ಜಿಲ್ಲೆಯ ಹಲವು ದೇವಳಗಳು ಜಲಾವೃತ್ತವಾಗುವುದು .ಮೂಲಸ್ಥಾನ ಬಿಂಬದ ಪಾದದವರೆಗೆ ನೀರು ಎತ್ತರಿಸುವುದನ್ನು ನಾವು ಕೇಳುತ್ತೇವೆ , ದೂರದರ್ಶನದಲ್ಲಿ ಕಾಣುತ್ತೇವೆ ,ಪತ್ರಿಕೆಗಳಲ್ಲಿ ಓದುತ್ತೇವೆ .
ಹಾಗಾದರೆ ಹೀಗೇಕೆ .....? ಉತ್ತರ
ಸರಳ , ಅವು ತಗ್ಗು ಪ್ರದೇಶ. ಹಾಗಾಗಿಯೇ ಬೇಗನೆ ನೆರೆ ನೀರಿನ ಮಟ್ಟ ಹೆಚ್ಚುತ್ತದೆ .
ಆಯಾ ದೇವಳಗಳ ನಿರ್ಮಾಣ ಕಾಲದ ದಂತಕತೆಯೋ , ಪುರಾಣಕತೆಯೋ ಈ ಸಂದರ್ಭಕ್ಕೆ ಅಂದರೆ ತಗ್ಗುಪ್ರದೇಶದಲ್ಲಿ ಯಾವ ಕಾರಣಕ್ಕೆ ದೇವಾಲಯ ನಿರ್ಮಾಣವಾಯಿತು ಎಂಬ ಮಾಹಿತಿಯನ್ನು ನೀಡುತ್ತವೆ .ಆದರೆ ಕೇಳುವ ಮನಃಸ್ಥಿತಿಬೇಕು.
ಭೌಗೋಳಿಕ ಸ್ವರೂಪ ಪರಿವರ್ತನೆಯನ್ನು ಗಮನಿಸಬೇಕು.
ಈ ಕುರಿತ ವಿಸ್ತಾರವಾದ ಕತೆಗೆ
ಉದಾಹರಣೆಗೆ ಉಡುಪಿ ಜಿಲ್ಲೆ ,ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ದೇವಳಕ್ಕೆ ಸಂಬಂಧಿಸಿದ ಪೌರಾಣಿಕ ಉಲ್ಲೇಖವನ್ನು ( ಮುದ್ರಿತ ಪುಸ್ತಕಗಳಿವೆ )
ಗಮನಿಸಿದರೆ ಒಂದು ಪುರಾಣವು ತೆರೆದುಕೊಳ್ಳುತ್ತದೆ , ಮತ್ತಷ್ಟು ಓದಿದರೆ ಪುರಾಣವನ್ನು ಸಮರ್ಥಿಸಬಹುದಾದಷ್ಟು ವಿವರಗಳು ಲಭಿಸುತ್ತವೆ.
ಎಲ್ಲೂರು ವಿಶ್ವೇಶ್ವರ ದೇವಾಲಯದ ವತಿಯಿಂದ 1919 ನೇ ಇಸವಿಯಲ್ಲಿ (ಇಂದಿಗೆ 101ವರ್ಷ ಹಿಂದೆ) ಮುದ್ರಣಗೊಂಡ ಸಂಸ್ಕೃತ ಶ್ಲೋಕಗಳಲ್ಲಿರುವ "ಯೆಲ್ಲೂರು ಮಹಾತ್ಮ್ಯಂ" ಎಂಬ ಸಣ್ಣ ಪುಸ್ತಕದಲ್ಲಿ ಬಹಳಷ್ಟು ಮಾಹಿತಿಗಳು ಲಭಿಸುತ್ತವೆ .ಈ ಶ್ಲೋಕಗಳ ತಾತ್ಪರ್ಯ ಸಹಿತದ ಪುಸ್ತಕ ಮೂರು ಮುದ್ರಣವಾಗುತ್ತದೆ.
ಕತೆ ಹೀಗೆ ಶಿವ - ಪಾರ್ವತಿಯರ ಸಂವಾದದಿಂದ ಆರಂಭವಾಗುತ್ತದೆ : ಪಾರ್ವತಿಯು ಮಹಾದೇವನನ್ನು ಕೇಳುತ್ತಾಳೆ .."ನೀನು ಯೆಲ್ಲೂರು ಕ್ಷೇತ್ರಕ್ಕೆ ಹೋಗಲು ಕಾರಣವೇನು" ಎಂದು ; ಆಗ ಪೂರ್ವದ ಸಂದರ್ಭವೊಂದರ ವಿಸ್ತಾರವಾದ ಕತೆಯನ್ನು ವಿಶ್ವೇಶ್ವರನು ಪಾರ್ವತಿಗೆ ಹೇಳುತ್ತಾ...
ಭಾರ್ಗವನೆಂಬ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ನಡುವೆ ಎಲ್ಲೂರು ಕ್ಷೇತ್ರವಿದೆ. ಆ ಹತ್ತು ಕ್ಷೇತ್ರಗಳಲ್ಲಿ ಕುಂಜೂರು ಒಂದು . ಈ ಕುಂಜೂರು ಕ್ಷೇತ್ರದ ಕುರಿತು "ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದು ಮಹಾದೇವನು ಉದ್ಗರಿಸುತ್ತಾನೆ.
ಎಲೈ ಪಾರ್ವತಿಯೇ... ರಹಸ್ಯವಾದುದನ್ನು ಹೇಳುತ್ತೇನೆ ಎನ್ನುತ್ತಾ.." ಎಲ್ಲೂರಿನಿಂದ ಪಶ್ಚಿಮದಲ್ಲಿ ವಾರುಣೀ ಎಂಬ ನದಿಯೊಂದು ಹರಿಯುತ್ತಿದೆ . ಅದು ಬಹುದೇಶಗಳನ್ನು ಕ್ರಮಿಸುತ್ತಾ ಅಂಕುಡೊಂಕಾಗಿ ಹರಿದು ಪಶ್ಚಿಮ ಸಮುದ್ರವನ್ನು ಸೇರುತ್ತದೆ (ಈಗ ಕುಂಜೂರು ದೇವಾಲಯ ಇರುವಲ್ಲಿ ನದಿ ಹರಿಯುತ್ತಿತ್ತು) . ನದಿ ಬಹಳ ಅಗಲವಾಗಿಯೂ ಇತ್ತು. ಇಲ್ಲಿ ಭಾರ್ಗವ ಮಹರ್ಷಿಯು ನದಿಯನ್ನು ಮುಚ್ಚಿ ಭೂಮಿಯನ್ನಾಗಿ ಮಾಡಿ ವಿಚಿತ್ರವಾದ ಯಜ್ಞವನ್ನು ಮಾಡಿದನು ( ಯಾಗ ಮಾಡಿದ ಸ್ಥಳವೊಂದು ಇವತ್ತಿಗೂ ಜಾಗ , ಯಾಜ ಎಂದು ಗುರುತಿಸಲ್ಪಡುತ್ತದೆ).
ಈ ರೀತಿಯಲ್ಲಿ ಯಜ್ಞಮಾಡಿದ ಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದ ಮಹರ್ಷಿ ಕ್ಷೇತ್ರಾಟನೆಗೆ ತೆರಳುತ್ತಾನೆ . ಕಾಲ ಉರುಳುತ್ತದೆ , ಭಾರ್ಗವ ಮಹರ್ಷಿಯಿಂದ ನಿರ್ಮಾಣವಾದ ಹೊಸ ಭೂಪ್ರದೇಶದಲ್ಲಿ ಮರ ,ಗಿಡಗಳು ಬೆಳೆಯುತ್ತವೆ ಆ ಪರಿಸರವು 'ಕುಂಜ' ಎಂದು ಗುರುತಿಸಲ್ಪಡುತ್ತದೆ .....ಹೀಗೆ ಕತೆ ಮುಂದುವರಿಯುತ್ತದೆ . ಮುಂದೆ 'ಕುಂಜೂರು' ಎಂದು ಜನಜನಿತವಾಗುತ್ತದೆ 'ಮಹತೋಭಾರ ಯೆಲ್ಲೂರು ವಿಶ್ವನಾಥ' ಮತ್ತು 'ಕುಂಜೂರು ಶ್ರೀದುರ್ಗಾ' ಪುಸ್ತಕಗಳನ್ನು ಓದಬಹುದು.
ಮೇಲೆ ವಿವರಿಸಿದ ಕತೆ ಒಂದು ಪುರಾಣ ಕತೆ. ನದಿಯ ಪಥವು ತಗ್ಗಾಗಿಯೇ ಇರುತ್ತದೆ . ಇಂತಹ ತಗ್ಗು ಪ್ರದೇಶವನ್ನೆ ಮುಚ್ಚಿದ ಮಹರ್ಷಿ ಯಾಗಮಾಡಿದ.
ಅಂದರೆ ಈ ಪ್ರದೇಶವೇ ತಗ್ಗಿನಲ್ಲಿತ್ತು. ಕನಿಷ್ಠ ೧೨೦೦ ವರ್ಷಗಳಷ್ಟು ಪೂರ್ವದಲ್ಲಿ ಈ ಸಂಗತಿ ನಡೆದಿದೆ .ಹಾಗಾಗಿಯೇ ಈಗ ಸತತ ಮಳೆಯಾದಾಗ ನೆರೆನೀರು ಸಹಜವಾಗಿ ತುಂಬಿಕೊಳ್ಳುತ್ತದೆ .ಅಂದರೆ ಪುರಾಣದ ಉಲ್ಲೇಖವನ್ನು ಸಮರ್ಥಿಸಿದಂತೆ ಆಗುವುದಿಲ್ಲವೇ?
ಈಗ ತಾನೆ ಕುಂಜೂರು ದೇವಳದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ತುಂಬಿರುವ ನೆರೆ ನೀರನ್ನು ಕಂಡಾಗ , ಹಿಂದಿನ ಕೆಲವು ನೆರೆಯ ಸಂದರ್ಭಗಳು ನೆನಪಿಗೆ ಬಂದುವು .ಹಾಗೆ ಈ ನಿರೂಪಣೆ ಬರೆಯುವ ಪ್ರೇರಣೆಯಾಯಿತು . ಇಂತಹ ಹಲವು ಕ್ಷೇತ್ರಗಳು ನಮ್ಮ ಜಿಲ್ಲೆಯಲ್ಲಿವೆ .
ವರದಿ (ಮಾಹಿತಿ) : ಕೆ.ಎಲ್.ಕುಂಡಂತಾಯ