ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಡಲಕಿನಾರೆ ಬಿಡದ ಪ್ರವಾಸೋದ್ಯಮ ಪ್ರವಾಸಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

Posted On: 27-09-2020 03:06AM

ಆನಂದ , ಆಶ್ಚರ್ಯ , ಆಮೋದಗಳನ್ನು ಏಕಕಾಲದಲ್ಲಿ ಪ್ರವಾಸಿಗೆ ನೀಡಬಲ್ಲ ಸೊಗಸಾದ ತಾಣಗಳಲ್ಲಿ ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರಮುಖವಾಗಿ ಗುರುತಿಸಲ್ಪಡುತ್ತದೆ .
ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ , ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ತೆರೆದುಕೊಂಡಿವೆ ಅಥವಾ ಅನಾವರಣಗೊಳಿಸಲಾಗಿದೆ ! ಗೊತ್ತಿಲ್ಲ . ಆದರೆ ಬಹುತೇಕ ನಮ್ಮ ಪ್ರವಾಸೋದ್ಯಮ ಕಡಲ ಕಿನಾರೆಯನ್ನು ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ . ಹಾಗಾದರೆ ಕಡಲು - ಘಟ್ಟದ ನಡುವೆ ಏನಿದೆ .‌
ನಮ್ಮ ಉಭಯ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು . ಇಲ್ಲಿ ಜಾನಪದ ಮೂಲದ ಆಚರಣೆ , ನಂಬಿಕೆಗಳಿವೆ . ಆರಾಧನಾ ಕಲೆಗಳು ,ಪ್ರದರ್ಶನ ರಂಗ ಕಲೆಗಳಿವೆ .
ಪರ್ವತ , ಗುಡ್ಡ , ಬೆಟ್ಟ , ಜಲಪಾತ , ಝರಿ , ನದಿ , ಹೊಳೆ , ಸಮುದ್ರ ಎಲ್ಲವೂಇದೆ . ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ .ಇತಿಹಾಸ ಹೇಳುವ ಪುರಾತನ ನಿರ್ಮಿತಿಗಳಿವೆ . ವೀರರ , ಪ್ರತಿಭಾವಂತರ , ಸಾಧಕರ , ದೈವೀಪುರುಷರ ಆಡುಂಬೊಲವಿದೆ . ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ . ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ವಾದನ - ನರ್ತನ - ಗಾಯನ - ರಂಗಿನ ಹಿನ್ನೆಲೆಯೊಂದಿಗೆ ಪ್ರತಿದಿನ ದೈವ - ದೇವಲೋಕಗಳು , ನಾಗ - ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ ,ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ.
ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು . ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು . ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ . ಬಹುತ್ವದ , ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ . ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ . ಅಂತಹ ಯಾವುದೇ ಮಾಹಿತಿ ಇಲ್ಲ . ನದಿಯಲ್ಲಿ ಸಾಹಸದ , ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ , ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ . ರೆಸಾರ್ಟ್ಗಗಳೂ ಇವೆ , ಅಷ್ಟಕ್ಕೆ ಸೀಮಿತವೇ ? ಗೊತ್ತಿಲ್ಲ .

ಸಮುದ್ರ ಕಿನಾರೆ
ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ . ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶವ . ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು . ಹಿನ್ನೀರಿನ ನೋಟವು ಅಗಾಧ ಜಲರಾಶಿ . ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ.

ಧಾರ್ಮಿಕ ಕ್ಷೇತ್ರಗಳು
ಪ್ರಸಿದ್ಧ ದೇವಾಲಯಗಳು , ಪವಿತ್ರ ನದಿ ಸ್ನಾನ - ತೀರ್ಥಸ್ನಾನದ ನದಿ ದಡಗಳು , ನಾಗ ಸನ್ನಿಧಾನಗಳು , ಮಾರಿಗುಡಿಗಳು , ಬ್ರಹ್ಮಸ್ಥಾನಗಳು , ದೈವಸ್ಥಾನಗಳು , ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ . ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ .
ಇಂತಹ ದೇವಾಲಯ , ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ .ಮೂರ್ತಿಗಳು - ಕಲ್ಲಿನ ಲೋಹಗಳ ವಿಶಿಷ್ಟ ಕಲಾಕೃತಿಗಳು - ಕುಸುರಿ ಕೆಲಸದ ಮಣೆ ಮಂಚವುಗಳಿವೆ ,ದೈವಗಳ ಭಂಡಾರದಲ್ಲಿ ಅಪೂರ್ವ - ಪವಿತ್ರ ವಸ್ತುಗಳಿರುತ್ತವೆ . ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು . ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ.
ಪ್ರಾಚೀನ ಚರ್ಚ್ , ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ .ಇಲ್ಲಿ ನಡೆಯುವ ಉರೂಸ್ , ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆ ಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು . ಪುರಾತನ ಚರ್ಚ್ ,ಮಸೀದಿಗಳ ಐತಿಹಾಸಿಕ ಮಹತ್ವ , ರಚನಾ ಶೈಲಿಗಳು ಮಹತ್ವಪೂರ್ಣವಾದುವೇ.

ಐತಿಹಾಸಿಕ ಸ್ಥಳಗಳು
ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು , ಕೋಟೆಗಳ ಅವಶೇಷಗಳು , ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು , ಚೌಕಿಮನೆಗಳು ,ಜಾನಪದ ವೀರರು ಹುಟ್ಟಿದ ಸ್ಥಳ - ನಡೆದಾಡಿದ ಪರಿಸರ - ಸಾಧಕ ವಿದ್ಯೆಕಲಿತ ಐಗಳಮಠ - ಗರಡಿಗಳು , ಪಾರ್ದನ - ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು ಇತಿಹಾಸ , ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ.
ಆಚರಣೆ - ಆರಾಧನೆ - ಕ್ರೀಡೆ
ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ - ಮೆಚ್ಚಿ - ಗೆಂಡ , ನಾಗಮಂಡಲ - ಡಕ್ಕೆಬಲಿ - ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ.
ದೇವಾಲಯಗಳ ವಾರ್ಷಿಕ ಜಾತ್ರೆ , ಕೋಲ - ನೇಮದ ಬಳಿಕ‌ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ , ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆಇದೆ . ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು .
ವಾದನ - ನರ್ತನ ವೈಭವ
ವಾದನ - ನರ್ತನಗಳು ಸಂತೋಷ , ಸಂಭ್ರಮದ ಸಂಕೇತಗಳಾಗಿ , ದೈವ - ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ . ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ - ನರ್ತನ ಪ್ರಮುಖವಾದುದು.
ಜಾನಪದ ನಾಗಸ್ವರ , ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು ,ಸಮ್ಮೇಳ ,ತಾಸ್ ಮಾರ್ , ದುಡಿ ತೆಂಬರೆ, ಡಕ್ಕೆ ,ದಿಡ್ಂಬು , ನಗರಿ , ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ , ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು.
ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ - ವಾದನ - ನರ್ತನ - ಸಾಹಿತ್ಯ ವೈಭವ,ಬೂತಾರಾಧನೆ ರಮ್ಯಾದ್ಭುತ ಸೊಗಸು , ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ ,ನಾಗಮಡಲ - ಡಕ್ಕೆಬಲಿಗಳಲ್ಲಿರುವ ನಾಟ್ಯ ,ವಾದನ ಮತ್ತು ಬಣ್ಣ ಹೀಗೆ ಬಣ್ಣದದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾ ರಂಗಕಲೆಗಳು ,ರಂಗಕಲೆಗಳು ನಮ್ಮಲಿವೇ.
ಆಹಾರದ ವಿವಿಧತೆ ನಮ್ಮಲಿವೆ , ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ . ಕಡಲಿನಿಂದ ದೊರೆಯುವ ಫ್ರೆಶ್ ,ಶುದ್ದ ಮೀನು ಕರಾವಳಿಯ ವಿಶೇಷ .ಈ ಆಹಾರ ವೈವಿಧ್ಯ ವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು .
ಕರಾವಳಿಯ ಉತ್ಪನ್ನಗಳು
ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ . ಕೈಮಗ್ಗದ ಬಟ್ಟೆಗಳು , ಜಾನಪದ ಸೊಗಸುಳ್ಳ ಚಿನ್ನ - ಬೆಳ್ಳಿಯ ಆಭರಣಗಳು , ದೈವ ದೇವರ ಮುಖ , ಮೂರ್ತಿ , ಆಭರಣಗಳು , ಪಂಚಲೋಹ - ಕಂಚಿನ ಮೂರ್ತಿಗಳು,
ಪಾತ್ರೆಗಳು ಕಬ್ಬಿಣದ ಚೂರಿ ,ಕತ್ತಿ ,ಕೊಡಲಿ , ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ , ಸೇರು , ಪಾವು , ಕಳಸೆ ,ಕಡೆಗೋಲು , ಮಣೆ ,ಮೆಟ್ಟುಕತ್ತಿ ,ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣ ಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು .
ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ ,ಗೆರಸೆ , ಬುಟ್ಟಿ ಹುರಿಹಗ್ಗ , ನಾರಿನಹಗ್ಗ , ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ , ಜಾತ್ರೆಗಳಲ್ಲಿ ,ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು . ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?.
ಸಾಂಸ್ಕೃತಿಕ ಭವ್ಯತೆ
ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು .ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು , ವಿವರಿಸಬೇಕು , ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು.
ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು .ಇತಿಹಾಸವನ್ನು ತಿರುಚಬಾರದು .ಈ ಧಾರ್ಮಿಕ ,ಐತಿಹಾಸಿಕ , ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು.
ವರ್ಣ , ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ , ಪ್ರಚುರಪಡಿಸುವ , ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯ .
ಬರಹ : ಕೆ. ಎಲ್.ಕುಂಡಂತಾಯ