ಮರಿಗೆಯಲ್ಲಿ ಮರೆಯಾದರೂ, ಮನೋರಥ ಸಿದ್ಧಿಯ ಕ್ಷೇತ್ರ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುತ್ತೂರು, ಉಡುಪಿ
Posted On:
24-10-2020 11:20PM
ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು , ಭೂಮಿತಾಯಿಯನ್ನು ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ , ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ ,ಪಾರ್ವತಿದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ 'ಭಗವತಿ'ಯ ಚಿಂತನೆ ಭವ್ಯವಾದುದು .ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ ದಿವ್ಯವಾದುದು .ಇಂತಹ ಅಲೌಕಿಕವಾದುದನ್ನು ಲೌಕಿಕದಲ್ಲಿ ಗುರುತಿಸಿದ ನೆಲೆಗಳಲ್ಲಿ "ಪುತ್ತೂರಮ್ಮ"ನ ಸನ್ನಿಧಿ ಒಂದು .ಈಕೆ "ಪುತ್ತೂರಪ್ಪೆ"ಯಾಗಿ ಪ್ರಸಿದ್ಧಳು - ಬಹುಮಾನ್ಯಳು. ದುಃಖ ದುಮ್ಮಾನಗಳಲ್ಲಿ 'ಅಪ್ಪೆ ತೂಪೆರ್' ಎಂಬಲ್ಲಿಯವರೆಗೆ ಗಟ್ಟಿಯಾದ ಅಥವಾ ಗಾಢವಾದ ಅವಿಚ್ಛಿನ್ನ ಸಂಬಂಧ . ನಂಬಿಕೆ - ಭರವಸೆಯೇ ಪ್ರಧಾನವಾಗಿರುವ ವಿಶ್ವಾಸದ ಸೆಲೆ . ಉಡುಪಿ ಸಮೀಪದ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಪುರಾಣ ,ಇತಿಹಾಸ , ದಂತಕತೆ ಸಹಿತ ಸಾಂದ್ರವಾದ ಜನಪದ ಹಿನ್ನೆಲೆಯನ್ನು ಹೊಂದಿದೆ .ಮೂಲಸ್ಥಾನ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರಿಯು ಉಪಸ್ಥಾನ ಗಣಪತಿ, ವೀರಭದ್ರರೊಂದಿಗೆ ಪರಿವಾರ ಶಕ್ತಿಗಳಾದ ರಕ್ತೇಶ್ವರೀ , ನಂದಿಗೋಣ , ಧೂಮಾವತಿ , ವಾರಾಹಿ, ವ್ಯಾಘ್ರಚಾಮುಂಡಿ ,ಕ್ಷೇತ್ರಪಾಲ ,ಬೊಬ್ಬರ್ಯ
ಹಾಗೂ ನಾಗ ದೇವರಿಂದ ಪರಿವೇಷ್ಟಿತಳಾಗಿ ಭಕ್ತಾಭೀಷ್ಟ ಫಲಪ್ರದಾಯಿಕಿಯಾಗಿದ್ದಾಳೆ .ಆದರೆ ಈ ಅಮ್ಮ ಮರೆಯಾಗಿದ್ದು ಮನೋರಥ ಈಡೇರಿಸುತ್ತಾಳೆ . ಜಾಗೃತ ಸನ್ನಿಧಾನವಾಗಿದೆ .
ಮರಿಗೆಯಲ್ಲಿ ಮರೆಯಾದಳು :ಅಮೂರ್ತವಾಗಿರುವುದೇ
ಅಲಂಕರಿಸಲ್ಪಟ್ಟು ಮೂರ್ತಸ್ವರೂಪದಿಂದ ಜನಪ್ರಿಯ ಮೂರ್ತಿಯಾಗಿ ಭಕ್ತರ ಮನಸ್ಸಿನಲ್ಲಿ ಸ್ಥಾಯೀಯಾಗಿ ಉಳಿಯುವಂತಹ ಸಂದರ್ಭಗಳು ಸಾಮಾನ್ಯ .ಆದರೆ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರೀಯು ಸುಂದರ ಬಿಂಬವನ್ನು ಹೊಂದಿ ಆಕರ್ಷಕಳಾಗಿದ್ದಳು .
ಅಘಟಿತ ಘಟನೆಯೊಂದು ನಡೆದು ಆಕೆ ತನ್ನ ಸರ್ವಾಭರಣ ಅಲಂಕೃತ ಸ್ವರೂಪವನ್ನು ಮರೆಮಾಚಿಕೊಂಡು "ಸ್ವಯಂಭೂ" ಸ್ವರೂಪದಂತೆ ವ್ಯಕ್ತಗೊಂಡಳು ಎಂಬುದು ಜನಜನಿತ ದಂತಕತೆ .
ಒಂದು ಕಾಲಕ್ಕೆ ಬಡ ಭಕ್ತರ ನೆರವಿಗೆ ಶುಭಕಾರ್ಯಗಳು ಮನೆಯಲ್ಲಿ ನಡೆಯುವ ವೇಳೆ ಬೇಕಾಗುವ ಚಿನ್ನದ ಆಭರಣಗಳನ್ನು ಅನುಗ್ರಹಿಸುವ ವಿಶೇಷ ಕಾರಣಿಕದ ಕ್ಷೇತ್ರ ಇದಾಗಿತ್ತು .ನಾಳೆಯ ಶುಭಕಾರ್ಯಕ್ಕೆ , ಇಂದಿನರಾತ್ರಿ ಪ್ರಾರ್ಥಿಸಿ ದೇವಿಯ ಮುಂದೆ ಹರಿವಾಣ ಇಡುವುದು .ಮರುದಿನ ಈ ಹರಿವಾಣದಲ್ಲಿ ಅಗತ್ಯ ಆಭರಣಗಳು ಇರುತ್ತಿದ್ದುವು .ಶುಭ ಸಮಾರಂಭದಲ್ಲಿ ಆಭರಣಗಳನ್ನು ಉಪಯೋಗಿಸಿಕೊಂಡು ಬಳಿಕ ಅವುಗಳನ್ನು ತೊಳೆದು ಶುದ್ಧೀಕರಿಸಿ ರಾತ್ರಿ ವೇಳೆ ಶ್ರೀ ದೇವಿ ಸನ್ನಿಧಾನಕ್ಕೆ ಮರಳಿಸುವ ಸಂಪ್ರದಾಯವಿತ್ತು .
ಇಂತಹ ವಿಶೇಷ ಅನುಗ್ರಹ ನಿರಂತರ ನಡೆಯುತ್ತಿತ್ತು ಎಂದು ದಂತಕತೆ ಹೇಳುತ್ತದೆ .ಒಂದು ಬಾರಿ ಒಬ್ಬಾಕೆ ಭಕ್ತೆ ಮೂಗುತಿಯೊಂದನ್ನು ಬದಲಾಯಿಸಿ ಇಡುತ್ತಾಳೆ .ಆ ದಿನ ರಾತ್ರಿ ಆಭರಣಗಳನ್ನು ದೇವಿಗೆ ಹಿಂದಿರುಗಿಸಿ ,ಅರ್ಚಕರು ಗರ್ಭಗುಡಿಯ ಬಾಗಿಲುಹಾಕಿ ಬೀಗಹಾಕುತ್ತಾರೆ , ಮರುದಿನ ಪ್ರಾತಃಕಾಲಕ್ಕೆ ಆಗಮಿಸಿದ ಅರ್ಚಕರು ಸ್ನಾನ ಪೂರೈಸಿ ದೇಗುಲದ ಗರ್ಭಗುಡಿಯ ಬಾಗಿಲು ತೆರೆದಾಗ ಅಚ್ಚರಿಯೊಂದು ಕಾದಿತ್ತು .ಅಭಿಷೇಕಕ್ಕಾಗಿ ನೀರು ತುಂಬಿಸಿ ಇಟ್ಟುಕೊಳ್ಳುವ (ಗರ್ಭಗುಡಿಯಲ್ಲಿ)ಕಲ್ಲಿನ ಮರಿಗೆ ಕವುಚಿ ಬಿದ್ದಿತ್ತು ,ಅದು ದೇವಿಯ ಮೂರ್ತಿಯನ್ನು ಸಂಪೂರ್ಣ ಆವರಿಸಿತ್ತು . ವಿಸ್ಮಯದಿಂದ ಅರ್ಚಕರು ಕಲ್ಲುಮರಿಗೆಯನ್ನು ಎತ್ತಿಡಲು ಪ್ರಯತ್ನಿಸುತ್ತಾರೆ ,ಅದು ಸಫಲವಾಗೇ ಹೋಯಿತು ,ಮರಿಗೆಗೆ ಪೂಜೆಮಾಡಿದರು ,
ಮನೆಗೆ ಬಂದರು .ರಾತ್ರಿ ನಿದ್ದೆಯಲ್ಲಿ ದೇವಿ ದರ್ಶನವಿತ್ತು ದುರಾಸೆಯಿಂದ ವಂಚನೆಯಾಗಿದೆ ಆದುದರಿಂದ ನನ್ನ ಮೂಗುತಿ ಇಲ್ಲದ ಮುಖವನ್ನು ತೋರಿಸಲಾರೆನೆಂದು ನಿರ್ಧರಿಸಿದ್ದೇನೆ .
ಕಲ್ಲುಮರಿಗೆಯೊಳಗೆ ಮರೆಯಾಗಿದ್ದೇನೆ .
ಮುಂದೆ ಮರಿಗೆಗೆ ಪೂಜೆಸಲ್ಲಲಿ ಎಂದು ಸೂಚಿಸುತ್ತಾಳೆ .
ಒಂದು ಕತೆಯು ,ಮುಲತಃ ಲಿಂಗರೂಪದಲ್ಲೆ ಸಾನ್ನಿಧ್ಯವಿತ್ತು ,ಅದಕ್ಕೆ ಸ್ತ್ರೀ ಅಲಂಕಾರ ಮಾಡಲಾಗುತ್ತಿತ್ತು , ಪೂಜೆ ನಡೆಯುತ್ತಿತ್ತು ಎಂಬ ಮಾಹಿತಿ ನೀಡಿದರೆ ಮತ್ತೊಂದು ಕತೆಯು ಸುಂದರ ಬಿಂಬರೂಪದಲ್ಲಿದ್ದ ಮಾತೆಯು ಈ ದುರಾಸೆಯ ಪ್ರಕರಣದ ಬಳಿಕ ತನ್ನ ಮೂಗುತಿ ರಹಿತ ಮುಖವನ್ನು ತೋರಿಸಲಾರೆನೆಂದು ಮರಿಗೆಯಲ್ಲಿ ಮರೆಯಾದದ್ದು ಎನ್ನುತ್ತದೆ .
ಈ ಎರಡು ಕತೆಗಳನ್ನು ಸಮನ್ವಯಗೊಳಿಸಿದಾಗ ಮೂಲತಃ ಈ ಸನ್ನಿದಾನವು "ಸ್ವಯಂಭೂ" ಆಗಿದ್ದು ಪ್ರಾಚೀನ ಶಕ್ತಿ ಆರಾಧನಾ ಕೇಂದ್ರವಾಗಿತ್ತು ಎಂದು ಹೇಳಬಹುದಾಗುತ್ತದೆ .ಈಗ ಪೂಜೆಗೊಳ್ಳುವ ಮರಿಗೆಯಂತಿರುವ ಅನಿಯಮಿತಾಕಾರದ ಶಿಲೆಯು 'ಸ್ವಯಂಭೂ' ಸ್ವರೂಪದಲ್ಲೆ ಕಾಣುತ್ತದೆ .
ಪರಶುರಾಮರಿಂದ ಪೂಜೆಗೊಂಡ ಅಥವಾ ಪರಶುರಾಮ ಕರಾರ್ಚಿತ ಭಗವತಿ ಶ್ರೀ ದುರ್ಗಾಪರಮೇಶ್ವರಿ ಎನ್ನುವುದು ನಂಬಿಕೆ .ಪರಶುರಾಮ ಸೃಷ್ಟಿಗೆ ಪರಶುರಾಮರೋ ಅಥವಾ ಆ ಗೋತ್ರಜರಾದ ಭಾರ್ಗವರೆಂಬ ಮಹನೀಯರು ನಿರಂತರ ಬರುತ್ತಿದ್ದರು ಎಂಬುದಕ್ಕೆ ಜಿಲ್ಲೆಯಲ್ಲಿ ವಿಫುಲ ಆಧಾರಗಳು ದೊರೆಯುತ್ತವೆ .
ಇತಿಹಾಸ :ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಲಿಂಗರೂಪದಲ್ಲಿ ಸ್ವಯಂಭೂ ಸನ್ನಿಧಾನಗಳಿವೆಯಾದರೂ ಪುತ್ತೂರಿನಲ್ಲಿ ಮರಿಗೆಯಾಕಾರದಲ್ಲಿರುವುದು ಒಂದು ವಿಶೇಷ ಎಂದು ವಿವರಿಸಿದ್ದಾರೆ .
ಬಲಿಮೂರ್ತಿಯ ಪ್ರತಿಮಾ ಲಕ್ಷಣವನ್ನು ಗಮನಿಸಿ ,ಈ ಮೂರ್ತಿಯು ಅರ್ವಾಚೀನವಾದುದು .ಆದರೆ ಪ್ರಾಚೀನ ಮೂರ್ತಿಯು ಪ್ರತಿಮಾ ಲಕ್ಷಣದಲ್ಲೆ ಈಗ ಇರುವ ಮೂರ್ತಿಯನ್ನು ನಿರ್ಮಿಸಿದುದ್ದಾಗಿದ್ದರೆ ದೇವಳಕ್ಕೆ ಕ್ರಿ.ಶ. 12-13 ಶತಮಾನದಷ್ಟು ಪ್ರಾಚೀನತೆಯನ್ನು ಹೇಳಬಹುದು . ಕ್ರಿ.ಶ. 7-8 ನೇ ಶತಮಾನದ ಬಳಿಕ ಶಕ್ತಿ ಆರಾಧನೆ ನಮ್ಮ ಉಭಯ
ಜಿಲ್ಲೆಗಳಲ್ಲಿತ್ತು ಎಂದು ಭಟ್ಟರು ಅಭಿಪ್ರಾಯಪಟ್ಟಿದ್ದರು.
ಉಪಸ್ಥಾನ - ಪರಿವಾರ : ಪುತ್ತೂರಮ್ಮನ ಉಪಸ್ಥಾನ ಸನ್ನಿಧಾನಗಳಲ್ಲೊಂದಾದ ವೀರಭದ್ರ ಸಂಕಲ್ಪವು ಪುರಾತನವಾದುದು .ಅದರೆ ಗಣಪತಿ ಕಳೆದ ಶತಮಾನದಲ್ಲಿ ಪ್ರತಿಷ್ಠಾಪಿಸಿದ್ದು ಎನ್ನುತ್ರಾರೆ ಹಿರಿಯ ಅರ್ಚಕರು .ಪರಿವಾರವಾಗಿ ಆದಿಮ ಸಂಸ್ಕೃತಿಯ ಅಥವಾ ಜಾನಪದ ಹಿನ್ನೆಲೆ ಇರುವ ಶಕ್ತಿಗಳನ್ನು ಸ್ವೀಕರಿಸಲಾಗಿದೆ .
ದೇವಳವು ಪೂರ್ವಾಭಿಮುಖವಾಗಿದ್ದು ಹೊರಾಂಗಣದ ದಕ್ಷಿಣ ಬದಿಯಲ್ಲಿ ಪರಿವಾರ ದೈವಗಳಿಗೆ ಸ್ಥಾನ ಕಲ್ಪಿಸಲಾಗಿದೆ .ನಾಗ ಸಾನ್ನಿಧ್ಯ ಪ್ರತ್ಯೇಕ ಸಂಕಲ್ಪವಿದೆ .ಮೂಲತಃ ಇದ್ದ ನಂಬಿಕೆ - ಆರಾಧನಾ ಸ್ಥಾನಗಳಲ್ಲೆ ಮತ್ತೆ ಬಂದ ವೈದಿಕದ ದೇವಸ್ಥಾನಗಳು ಸ್ಥಾಪನೆಯಾದುವು ಎಂಬ ಒಂದು ಒಪ್ಪಿಗೆಗೆ ಪುತ್ತೂರು ಸಹಾ ಒಂದು ಆಧಾರವಾಗುತ್ತದೆ .
ಅನುಗ್ರಹ :ದೇವಸ್ಥಾನಗಳಲ್ಲಿ ಮದುವೆಗಳು ನೆರವೇರುವ ಕ್ರಮವೊಂದು ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದಲೇ ಆರಂಭವಾಯಿತು ಎಂಬ ಒಡಂಬಡಿಕೆಯೊಂದಿದೆ .ಇದರೊಂದಿಗೆ ವಡಭಾಂಡೇಶ್ವರ ದೇವಸ್ಥಾನದ ಹೆಸರೂ ಸೇರಿಕೊಳ್ಳುತ್ತದೆ . ಇದಕ್ಕೆ ಪೂರ್ವಭಾವಿಯಾಗಿ ಯೋಚಿಸಿದರೆ ಇದೊಂದು ಮಂಗಲ ಕಾರ್ಯಗಳಿಗೆ ಅನುಗ್ರಹಿಸುತ್ತಿದ್ದ ಮಂಗಲ ಸಾನ್ನಿಧ್ಯ ಇದ್ದಿರಬೇಕು ಎಂದು ಗ್ರಹಿಸಬಹುದು .
ಸಂತಾನ ಫಲಪ್ರಾಪ್ತಿಯ ಸಿದ್ಧಿಕ್ಷೇತ್ರ ಎಂಬುದು ಇನ್ನೊಂದು ಹೆಗ್ಗಳಿಕೆ ಇದೆ .ವಾರ್ಷಿಕ ಮಹೋತ್ಸವ ಕಾಲದಲ್ಲಿ ಶಯನೋತ್ಸವದ ವೇಳೆ ಬಲಿಮೂರ್ತಿಯ ಬಲಕೈಗೆ ಕಟ್ಟುವ 'ಅಡಿಕೆ ಮತ್ತು ಅರಸಿನದ ಕೋಡ'ನ್ನು ಅವಭೃತದ ವೇಳೆ ಬಿಚ್ಚಿ ತೆಗೆಯುವಾಗ ಅಥವಾ ಬಳಿಕ ಮಂತ್ರಾಕ್ಷತೆಯ ಸಂದರ್ಭದಲ್ಲಿ ಸಂತಾನ ಅಪೇಕ್ಷೆಯ ಸತಿ - ಪತಿಯರು ತಂತ್ರಿಯವರಿಂದ ಪಡೆಯಬೇಕು . ಸತಿಯು ಪುಷ್ಪವತಿಯಾಗಿ ನಾಲ್ಕನೇ ದಿನದಿಂದ ಹದಿನಾರನೇ ದಿನದವರೆಗಿನ ಅವಧಿಯಲ್ಲಿ ಪ್ರತಿದಿನ ರಾತ್ರಿ ಅಡಿಕೆಯನ್ನು ತುಂಡರಿಸಿ ತಿನ್ನುವುದು , ಇದರೊಂದಿಗೆ ಅರಸಿನ ಕೋಡನ್ನು ತೇದು ತೆಗೆದು ಕೊಳ್ಳವುದು .
ಇದರಿಂದ ಶರೀರ ಶುದ್ಧಿಯಾಗಿ ಸತ್ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಭಗವತಿ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹ ಎನ್ನುತ್ತಾರೆ ದೇವಳದ ತಂತ್ರಿಗಳು .
ದುರ್ಗಮ ದುರಿತಗಳು ನಿವಾರಣೆಯಾಗುತ್ತವೆ , ಆಪತ್ತುಗಳು ಪರಿಹಾರವಾಗುತ್ತದೆ ಎಂಬುದು ನಂಬಿ ಬರುವ ಭಕ್ತರ ಅಭಿಪ್ರಾಯ .
ನವರಾತ್ರಿ : ಬೆಳಗ್ಗೆ ಪ್ರತಿದಿನ ನಿರ್ಮಾಲ್ಯ ವಿಸರ್ಜನೆ ,ಪೂಜೆ .ಪಂಚಾಮೃತ ಅಭಿಷೇಕ .
ಮಧ್ಯಾಹ್ನ ಮಹಾಪೂಜೆ . ಭಕ್ತರ ವತಿಯಿಂದ ಚಂಡಿಕಾಯಾಗ , ಮುತ್ತೈದೆಯರಿಗೆ ಬಾಗಿನಿ ,ಕನ್ನಿಕಾಪೂಜೆ . ಅನ್ನಸಂತರ್ಪಣೆ ( ಈ ವರ್ಷ ಕೊರೊನ ಕಾರಣವಾಗಿ ಅನ್ನಸಂತರ್ಪಣೆ ನಡೆಸಲಾಗುವುದಿಲ್ಲ) .ರಾತ್ರಿ ಕಲ್ಪೋಕ್ತಪೂಜೆ , ಹೂವಿನ ಪೂಜೆ .
ನವರಾತ್ರಿಯ ಏಳನೇ ದಿನ ಊರಿನ ಭಕ್ತಾದಿಗಳಿಂದ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ .ಕೊರೊನ ಕಾರಣವಾಗಿ ಸರಕಾರದ ಸೂಚನೆಯಂತೆ ನವರಾತ್ರಿ ಆಚರಣೆ ನಡೆಯುತ್ತಿದೆ.
ಕೆ.ಎಲ್.ಕುಂಡಂತಾಯ