ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಘಂಟಾನಾದ ಸೇವೆಯಲ್ಲಿ ಇಷ್ಟಾರ್ಥ ಸಿದ್ಧಿ - ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

Posted On: 31-07-2025 04:31PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನಕ್ಕೆ ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕುಟುಂಬದ ಎಲ್ಲಾ ಸದಸ್ಯರು ನವದುರ್ಗಾ ಲೇಖನ ಯಜ್ಞದ ಸಂಕಲ್ಪವನ್ನು ಮಾಡಿದರು. ಪತ್ನಿ ರಂಜಿತಾ ರಾಧಾ ದೇವಿಗೆ ಸೀರೆ ಮತ್ತು ಬಾಗಿನ ನೀಡಿದರು. ಪುತ್ರ ವಿಹಾನ್ ಕಾರ್ಣಿಕ್ ಜೊತೆಗಿದ್ದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ "ಅಮ್ಮನ ಅನುಗ್ರಹ ಪ್ರಸಾದ" ನೀಡಿ ಗೌರವಿಸಿದರು.

ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ನಾಗರಪಂಚಮಿಯ ಪರ್ವಕಾಲದಲ್ಲಿ ಕಾಪು ಮಾರಿಯಮ್ಮನ ಸನ್ನಿದಾನಕ್ಕೆ ಬಂದಿದ್ದೇನೆ. ಎಲ್ಲಾ ಸೇವೆಯನ್ನು ಮಾಡುವ ಜೊತೆಗೆ ವಿಶೇಷವಾಗಿ ಘಂಟಾನಾದ ಸೇವೆಯನ್ನು ಮಾಡಿದೆನು. ಇಲ್ಲಿನ ಬೃಹತ್ ಘಂಟೆಯನ್ನು ಬಾರಿಸುವ ಮೂಲಕ ನನ್ನ ಬೇಡಿಕೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದೇನೆ ಎಂದರು. ಅಯೋಧ್ಯೆಯಲ್ಲಿ ದೇಶದ ಪ್ರಥಮ ಬೃಹತ್ ಗಾತ್ರದ ಘಂಟೆ ಇದ್ದರೇ, ಎರಡನೇಯದ್ದು ಉಡುಪಿಯ ಕಾಪುವಿನಲ್ಲಿ ಇರುವಂತದ್ದು. ಘಂಟಾನಾದ ಅದ್ಭುತವಾಗಿದೆ, ಕಂಪನಾಂಶಗಳನ್ನು ಕೇಳುತ್ತಿದ್ದರೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಗೌರವ ಸಲಹೆಗಾರ ನಿರ್ಮಲ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.