ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಿಲಾನ್ಯಾಸ
ಕಟಪಾಡಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರಿಂದ 25 ಲಕ್ಷ ರೂಪಾಯಿ ಮತ್ತು ಮಣಿಪುರ ಗ್ರಾಮ ಪಂಚಾಯತ್ ಶೇ.5ರ ಜಂಟಿ ಅನುದಾನದಲ್ಲಿ ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಶಿಲಾನ್ಯಾಸಗೈದರು. ಈ ಸಂದರ್ಭ ಮಾತನಾಡಿದ ಅವರು ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಡಿ 10 ಲಕ್ಷ ರೂ. ಅನುದಾನವನ್ನು ಒದಗಿಸಲು ಬದ್ಧ ಎಂದರು.
ಶಂಕುಸ್ಥಾಪನೆ ನಡೆಸಿದ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ, ಜನರ ನಿರೀಕ್ಷೆಗೆ ಆದ್ಯತೆಯನ್ನು ನೀಡಿ 19 ಶಾಸಕರ ವಿಶ್ವಾಸಗಳಿಸಿ ಬಯಲು ರಂಗಮಂಟಪಕ್ಕೆ 23.75 ಲಕ್ಷ ರೂ. ಅನುದಾನವನ್ನು ಹೊಂದಿಸಿಕೊಳ್ಳಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಅವಶ್ಯಕವಾದ ಬಯಲು ರಂಗ ಮಂಟಪ ಗ್ರಾಮದ ಕೇಂದ್ರವಾಗಿ ಬೆಳೆದು ಬರಲಿದೆ. ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೂ ಅನುದಾನ ಒದಗಿಸಲು ಬದ್ಧ ಎಂದರು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಬಯಲು ರಂಗ ಮಂಟಪ ನಿರ್ಮಾಣಕ್ಕೆ ಅನುದಾನ ಒದಗಿಸಲು ಸಹಕರಿಸಿದ ಮಟ್ಟಾರು ರತ್ನಾಕರ್ ಹೆಗ್ಡೆ, ಕ್ಷೇತ್ರ ಶಾಸಕ ಲಾಲಾಜಿ ಆರ್ ಮೆಂಡನ್, ಮಣಿಪುರಗ್ರಾಮ ಪಂಚಾಯತ್‌ಗೆ ಕೃತಜ್ಞತೆ ಸಲ್ಲಿಸಿದರು. ಮಣಿಪುರ ಗ್ರಾ.ಪಂ. ಅಧ್ಯಕ್ಷ ಹಸನ್ ಶೇಕ್ ಅಹಮದ್, ಪ್ರಮುಖರಾದ ರಾಘು ಪೂಜಾರಿ ಕಲ್ಮಂಜೆ, ನ್ಯಾಯವಾದಿ ಎನ್.ಕೆ. ಆಚಾರ್ಯ ಮಾತನಾಡಿದರು.
ಅರ್ಚಕ ವೇ|ಮೂ|ಗಣೇಶ್ ಭಟ್ ಶಿಲಾನ್ಯಾಸ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಕರಾಮ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ವಿನ್ನಿಫ್ರೆಡ್ ಡಿಸೋಜ, ಸದಸ್ಯರುಗಳಾದ ಸಂತೋಷ್ ಶೆಟ್ಟಿ, ಆಶಾ ಶೇಖರ್, ಡೆನ್ಜಿಲ್ ಡಿಸೋಜ, ಜಾನ್ ಸಿಕ್ವೇರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಸಲಹೆಗಾರ ಭೂವರಾಹ ಆಚಾರ್ಯ, ಗುರುರಾಜ್ ಭಟ್, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ತೋಟದಮನೆ ವೇದಿಕೆಯಲ್ಲಿದ್ದರು. ಮಣಿಪುರ ಗ್ರಾ.ಪಂ ಪಿಡಿಓ ಮೋಹನ್ ರಾವ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ ವಂದಿಸಿದರು. ಪ್ರಧಾನ ಅಧ್ಯಾಪಕಿ ಶ್ರೀಮತಿ ವೈ. ನಿರೂಪಿಸಿದರು.
