ಉಡುಪಿ : ಜೆಸಿಐ ಭಾರತ ವಲಯ ಹದಿನೈದು ಇದರ ವತಿಯಿಂದ ಜೆಸಿಐ ಉಡುಪಿ ಸಿಟಿ ಇದರ ಆಥಿತ್ಯದಲ್ಲಿ ಘಟಕಾಧಿಕಾರಿಗಳ ತರಬೇತಿ ಕಮ್ಮಟ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಫೆ.7 ಮತ್ತು 8ರಂದು 2 ದಿನಗಳ ಕಾಲ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಲಯ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಜೆಸಿ ಸಂಸ್ಥೆಯು ತರಬೇತಿಯ ಮೂಲಕ ವ್ಯಕ್ತಿತ್ವದಲ್ಲಿ ಬದಲಾವಣೆ ತರುವಲ್ಲಿ ಅಪೂರ್ವವಾವಾಗಿ ಕಾರ್ಯನಿರ್ವಹಿಸುತ್ತಿದೆ. ಜಗತ್ತಿನಲ್ಲಿ ವಿವಿಧ ಸಂಸ್ಥೆಗಳು ಇದ್ದರೂ ವ್ಯಕ್ತಿತ್ವ ವಿಕಸನಕ್ಕಾಗಿ ಇರುವ ಏಕೈಕ ಸಂಸ್ಥೆ ಜೆ ಸಿ ಐ. ಘಟಕ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಈ ತರಬೇತಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಲಯ ಆಡಳಿತ ವಿಭಾಗದ ನಿರ್ದೇಶಕ ಸುಹಾಸ್ ಮರಿಕೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ತರಬೇತುದಾರರಾದ ಅಂತರಾಷ್ಟ್ರೀಯ ತರಬೇತಿದಾರ ಪ್ರಮೋದ್ ಕುಮಾರ್, ಸಹ ತರಬೇತಿದಾರರಾದ ರಾಕೇಶ್ ಹೊಸಬೆಟ್ಟು, ಸುಧಾಕರ್ ಕಾರ್ಕಳ, ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ, ನಿಕಟ ಪೂರ್ವ ವಲಯ ಅಧ್ಯಕ್ಷ ಅಭಿಲಾಶ್, ವಲಯ ಕಾರ್ಯದರ್ಶಿ ಪ್ರಶಾಂತ್, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಕಾರ್ಯಕ್ರಮ ನಿರ್ದೇಶಕ ಕಿರಣ್ ಭಟ್ ಮುಂತಾದವರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ತರಬೇತಿಯಲ್ಲಿ ವಿವಿಧ ಘಟಕದ ಸುಮಾರು 200 ಘಟಕ ಅಧ್ಯಕ್ಷರುಗಳು ಭಾಗವಹಿಸಿದ್ದರು.
