ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮಝಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತ್ತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿ ಯವರು ಹೇಳಿದರು.
ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ ಯಲ್ಲಿ ಕಾಪು ಜಮಾ ಅತೆ ಇಸ್ಲಾಮೀ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಒರ್ಗನೈಜೆಷನ್ (ಎಸ್. ಐ. ಓ) ಹಮ್ಮಿಕೊಂಡಿದ್ದ ರಮಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತಾಡಿದರು.
ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿಯೇ ಇರಬೇಕು. ಸದಾ ನಮ್ಮ ಹೃದಯವನ್ನು ಸ್ವಚ್ಚವಾಗಿರಿಸಬೇಕು. ಸಂಬಂಧಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ನಮ್ಮಿಂದ ಆಗಿರುವ ತಪ್ಪನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆಯಾಚಿಸಬೇಕು. ನಮ್ಮ ಗರಿಷ್ಠ ಸಮಯ ಕುರ್ ಆನ್ ಅಧ್ಯಯನಕ್ಕೆ ಮೀಸಲಾಗಿಡಬೇಕು. ಇದರಿಂದ ನಮಗೆ ಅಲ್ಲಾಹನ ಸಂಪ್ರೀತಿ ದೊರಕುವುದು. ಈ ಎಲ್ಲಾ ಗುಣಗಳನ್ನು ಮೈಗೂಡಿಸಿ ಕೊಳ್ಳಲು ರಮಝಾನ್ ಮಾಸ ಸೂಕ್ತವಾಗಿದೆ. ಹೀಗೆ ನಾವು ಮಾಡಿದರೆ ರಮಝಾನ್ ಮಾಸದ ಪುಣ್ಯಗಳನ್ನು ಪಡೆದು ಕೊಳ್ಳಬಹುದು. ಅದಕ್ಕಾಗಿ ಈ ಮಾಸದ ಸ್ವಾಗತಕ್ಕಾಗಿ ನಾವು ಸಿದ್ದರಾಗಿರಬೇಕು ಎಂದು ಹೇಳಿದರು.
ಎಸ್. ಐ. ಓ. ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ರವರು ಮಾತನಾಡಿ, ಕುರ್ ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಅದು ಜನರಿಗೆ ದೀಪಸ್ತಂಭದಂತೆ ಕತ್ತಲೆಯಲ್ಲಿ ಇರುವವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತದೆ.
ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಈ ಕುರ್ ಆನ್ ಅವತ್ತೀರ್ಣಗೊಂಡದ್ದು ರಮಝಾನ್ ಮಾಸದಲ್ಲಿ ಆಗಿದ್ದು, ರಮಝಾನ್ ಮಾಸ ಜನರನ್ನು ಒಳಿತಿನತ್ತ ಕೊಂಡೊಯ್ಯುತ್ತದೆ. ಕುರ್ ಆನ್ ನೊಂದಿಗೆ ಗಾಢ ಸಂಬಂಧ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಸಮಯ ಸೂಚಿ ಸಿದ್ದಪಡಿಸಿ ಅದರ ಪಠಣ, ಅನುವಾದ, ವ್ಯಾಖ್ಯಾನದ ಅಧ್ಯಯನ ಮಾಡಬೇಕು. ಇಂದಿನ ದಿನಗಳಲ್ಲಿ ಮೊಬೈಲ್ ಹಾವಳಿ ಜಾಸ್ತಿ ಆಗಿದ್ದು, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಮಾಸದಲ್ಲಿ ಪಣ ತೊಡಬೇಕು ಎಂದು ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ಎಸ್. ಐ. ಓ. ನ ಧ್ಯೇಯೋದ್ದೇಶ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಕಾರ್ಯ ಯೋಜನೆಯ ಬಗ್ಗೆ ಮತ್ತು ರಮಝಾನ್ ಮಾಸದ ಸ್ವಾಗತ ಯಾಕಾಗಿ ಎಂದು ವಿವರಿಸುತ್ತಾ ಪ್ರಾಸ್ತವಿಕವಾಗಿ, ಸ್ವಾಗತಿಸಿದರು.
ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಜದೀದ್ ಕಲಾನ್ ನ ಅಧ್ಯಕ್ಷರು ಜನಾಬ್ ಶಭಿ, ಅಹಮದ್ ಕಾಝಿ ಉಪಸ್ಥಿತರಿದ್ದರು.
ಹಾಫಿಜ್ ಎ ಕುರ್ ಆನ್ ಒಬಾದ ಜರ್ರಾರ್ ರವರ ಕುರ್ ಆನ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಎಸ್. ಐ.ಓ. ಸದಸ್ಯ ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
