ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಧುರೀಣ ಡಾ| ಕೆ. ಪ್ರಭಾಕರ ಶೆಟ್ಟಿ ನಿಧನ
ಕಾಪು : ಕಾಪುವಿನ ಹಿರಿಯ ವೈದ್ಯ, ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ, ಪ್ರಶಾಂತ್ ಹಾಸ್ಪಿಟಲ್‌ನ ಸಂಸ್ಥಾಪಕ ಡಾ| ಕೆ. ಪ್ರಭಾಕರ ಶೆಟ್ಟಿ (81) ಅವರು ಜನವರಿ 15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಕಾಪು ಗೋವಿಂದ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ ಮತ್ತು ಪುತ್ರ ಗೃಹರಕ್ಷಕದಳದ ಉಡುಪಿ ಜಿಲ್ಲಾ ಕಮಾಂಡೆಂಟ್ / ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ| ಕೆ. ಪ್ರಶಾಂತ್ ಶೆಟ್ಟಿ ಅವರನ್ನು ಅಗಲಿದ್ದಾರೆ.
ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿದ್ದ ಅವರು ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿಗಾಗಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದರು. ಕಾಪು ಶಾಂತಿ ಪಾಲನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಹಲವು ವರ್ಷಗಳ ಹಿಂದೆ ಸಂಭವಿಸಿದ್ದ ಕೋಮು ಘರ್ಷಣೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
ಉಳಿಯಾರಗೋಳಿ ದಂಡತೀರ್ಥ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕತ್ವವನ್ನು ವಹಿಸಿಕೊಂಡ ಅವರು ಬಳಿಕ ಗ್ರಾಮೀಣ ವಿದ್ಯಾರ್ಥಿಗಳ ಅವಶ್ಯಕತೆಗನುಣವಾಗಿ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ ಮತ್ತು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶಕ್ತಿಮೀರಿದ ಶ್ರಮ ವಹಿಸಿದ್ದರು. ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ಕಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಐಎಂಎ ಕರಾವಳಿ ಇದರ ಅಧ್ಯಕ್ಷರಾಗಿ, ಉಡುಪಿ ಕರಾವಳಿ ಐಎಂಎ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಹಿಂದ್ ಕುಷ್ಠ ನಿವಾರಣಾ ಸಂಘ ಕಾಪು ಘಟಕದ ಗೌರವ ವೈದ್ಯಾಧಿಕಾರಿಯಾಗಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಲಹಾ ಸಮಿತಿಯ ಸದಸ್ಯರಾಗಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೀಕ್ಷಕ ವಿಭಾಗದ ಸದಸ್ಯರಾಗಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾಗಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಜೀವ ಸದಸ್ಯರಾಗಿ, ಕಾಪು ಲಯನ್ಸ್ ಕ್ಲಬ್‌ನ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಜಿಲ್ಲಾ ಕ್ಯಾಬಿನೆಟ್ ಸದಸ್ಯರಾಗಿ, ಭಾರತೀಯ ಜೀವ ವಿಮಾ ನಗಮದ ವೈದ್ಯಕೀಯ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಪುವಿನ ಪ್ರಥಮ ಚಿನ್ನದ ಪದಕ ಪುರಸ್ಕೃತ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು 55 ವರ್ಷಗಳ ಸುದೀರ್ಘ ಗ್ರಾಮೀಣ ಸೇವೆಗಾಗಿ ಹಲವು ಗೌರವ - ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ, ಲಯನ್ಸ್ ಸೇವಾ ಪುರಸ್ಕಾರ, ಗ್ರಾಮೀಣ ಸೇವೆಗಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಸಿಂಡಿಕೇಟ್ ಬ್ಯಾಂಕ್, ರೋಟರಿ ಕ್ಲಬ್ ಸಹಭಾಗಿತ್ವದ ಹೊಸ ವರ್ಷದ ಸಾಧನಾ ಪ್ರಶಸ್ತಿ, ಕರ್ನಾಟಕ ಸ್ಟೇಟ್ ಮೆಡಿಕಲ್ ಅಸೋಸಿಯೇಶನ್, ಐ.ಎಮ್.ಎ. ಉಡುಪಿ ಕರಾವಳಿಯಿಂದ ಸಮ್ಮಾನ, ಕಾಪು ತುಳುಕೂಟ, ಉಡುಪಿ ಜಯಂಟ್ಸ್ ಸಂಸ್ಥೆಗಳಿಂದ ಸಮ್ಮಾನ, ಶೀರೂರು ಮಠದಿಂದ ಶ್ರೀ ಕೃಷ್ಣ ವಿಠಲ ಪರಮಾನುಗ್ರಹ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಮೊದಲಾದ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
