ಕಾಪು ಸುಗ್ಗಿ ಮಾರಿಪೂಜೆಗೆ ಕ್ಷಣಗಣನೆ : ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ
ಕಾಪು : ಇಲ್ಲಿನ ಮಾರಿಯಮ್ಮನ ಗರ್ಭಗುಡಿ, ಉಚ್ಚಂಗಿ ಗರ್ಭಗುಡಿ, ಗೋಪುರಗಳು, ಮುಖಮಂಟಪ, ಸುತ್ತುಪೌಳಿ ಹಾಗೂ ಇನ್ನಿತರ ಅಭಿವೃದ್ಧಿ ಯೋಜನೆಗಳ ಸಂಕಲ್ಪದೊಂದಿಗೆ ಸುಮಾರು 30ಕೋಟಿ ರೂಪಾಯಿ ವೆಚ್ಚದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದ ಜೀರ್ಣೋದ್ದಾರ ಕೆಲಸಗಳು ಭರದಿಂದ ಸಾಗುತ್ತಿದ್ದು, ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಕ್ಕೆ ಶಿಲಾಸೇವೆ ಸಮರ್ಪಣೆಗೆ ಸಂಕಲ್ಪಿಸಲಾಗಿದ್ದು ಅದಕ್ಕೆ ಪೂರಕವಾಗಿ ಮಾರ್ಚ್ 22 ಮತ್ತು 23ರಂದು ನಡೆಯಲಿರುವ ಸುಗ್ಗಿ ಮಾರಿಪೂಜೆಯಂದು ಭಕ್ತಾದಿಗಳಿಗೆ ಶಿಲಾಸೇವೆ ನೀಡಿ ಶಿಲಾ ಪುಷ್ಪ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಮಾರಿಯಮ್ಮನ ಭಕ್ತರಿಗೆ ಶಿಲಾಸೇವೆ ಸಮರ್ಪಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ದವಾಗಿ ನಡೆಸಲು ನಿರ್ಧರಿಸಲಾಗಿದೆ.
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಾ.22 ರಂದು ಮಾರಿಗುಡಿಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಸರತಿ ಸಾಲಿನಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಮತ್ತು ಶಿಲಾಪುಷ್ಪ ಸಮರ್ಪಣೆ ಯೋಜನೆಯನ್ನು ಸಾಕಾರಗೊಳಿಸುವುದಕ್ಕಾಗಿ ಕಾಪು ಪುರಸಭಾ ವ್ಯಾಪ್ತಿಯ 23 ವಾರ್ಡ್ಗಳಿಂದ ಆರಿಸಲ್ಪಟ್ಟ 500ಕ್ಕೂ ಅಧಿಕ ಮಂದಿ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದ್ದು ಭಕ್ತಾದಿಗಳಿಗೆ ಅವರು ಸಂಪೂರ್ಣ ಸಹಕಾರ ನೀಡಲು ಬೇಕಾದ ತರಬೇತಿಯನ್ನು ನೀಡಲಾಗಿದೆ.
ಕನಿಷ್ಠ 9 ಶಿಲಾಸೇವೆ ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತಾದಿಗಳನ್ನು ಅಮ್ಮನ ಸನ್ನಿದಿಯ ವೇದಿಕೆಯಲ್ಲಿ ಪ್ರಸಾದ ನೀಡಿ ಗೌರವಿಸಲಾಗುವುದು.
9 ಶಿಲಾ ಸೇವೆ (ರೂಪಾಯಿ 9,999) ಮತ್ತು ಅದಕ್ಕಿಂತ ಹೆಚ್ಚಿನ ಶಿಲಾ ಸೇವೆ ನೀಡುವ ಭಕ್ತರು ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಂಡು, ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಕೇಳಿ ಕೊಳ್ಳುತ್ತೇವೆ.
ಮಾರ್ಚ್ 22 ಮತ್ತು 23 ರಂದು ಜರಗಲಿರುವ ವಾರ್ಷಿಕ ಸುಗ್ಗಿ ಮಾರಿಪೂಜೆಯ ಸಂದರ್ಭ ಹಿಂದಿನಿಂದ ನಡೆದುಕೊಂಡು ಬಂದಿರುವ ಎಲ್ಲಾ ವಿಧಿವಿಧಾನಗಳನ್ನು ಯಾವುದೇ ತೊಂದರೆಯಾಗದಂತೆ ನಡೆಸಿಕೊಂಡು ಬರಲಾಗುವುದು. ಮಾರ್ಚ್ 22 ರ ಮಂಗಳವಾರ ಬೆಳಿಗ್ಗೆ 9ಗಂಟೆಯಿಂದ ಮಾರ್ಚ್ 23ರ ಸಂಜೆ 6 ಗಂಟೆಯವರೆಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಸಿದ್ಧತೆಗಳನ್ನು ನಡೆಸಲಾಗಿದೆ. ಸ್ವಯಂ ಸೇವಕರು ಮಾತ್ರವಲ್ಲದೆ ಪೋಲಿಸ್ ಇಲಾಖೆ, ಗೃಹರಕ್ಷಕದಳ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಪೋಲಿಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು.
ಪಾರ್ಕಿಂಗ್ ಸೌಲಭ್ಯಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಎರಡು ದಿನಗಳ ಕಾಲ ನಿರಂತರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಪರವೂರಿನ ಭಕ್ತಾಧಿಗಳು ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇವೆ ಎಂದು ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
