ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋಗೆ ಸಿದ್ಧ ; ಮುಂದೆ ಇಲ್ಲಿಯ ಎರಡು ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ಸಿದ್ಧತೆ - ಯಶ್ಪಾಲ್ ಸುವರ್ಣ
ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿರುವ ಪ್ರಸಿದ್ಧ ಕಾರಣಿಕದ ಸ್ಥಳ ಬಬ್ಬುಸ್ವಾಮಿ ದೈವ ಮಾಯವಾದ ಮಿಂಚಿನ ಬಾವಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ತಗಡಿನ ಮೇಲ್ಛಾವಣಿ ಹಾಕುವ ಬಗೆಗೆ ಎಸ್ಡಿಪಿಐ ಬೆಂಬಲಿತ ಸ್ಥಳೀಯ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣೆಯಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಆಕ್ಷೇಪವೆತ್ತಿದವರ ಜೊತೆಗಿನ ಸಭೆಯು ನಡೆದಿತ್ತು. ಆದರೆ ಇದು ಪ್ರಯೋಜನಕಾರಿಯಾಗಿರಲಿಲ್ಲ.
ಮೇ. 31 ರಂದು ಕ್ಷೇತ್ರಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಹಿಂ.ಮೋರ್ಚಾದ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮಾತನಾಡಿ ಶ್ರದ್ಧಾ ಭಕ್ತಿಯ ತಾಣವಾದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ಶಕ್ತಿಗಳ ಈ ಕ್ಷೇತ್ರಕ್ಕೆ ಅಡ್ಡಿಪಡಿಸಲು ಯಾರಿಂದಲು ಸಾಧ್ಯವಿಲ್ಲ. ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಅವರು ಯಾರು ಎಂದು ಪ್ರಶ್ನಿಸಿದರು.
ಸರಕಾರಿ ಜಾಗದಲ್ಲಿ ಮೇಲ್ಛಾವಣಿ ಬರುತ್ತದೆ ಎಂದು ಅವರು ದೂರುತ್ತಿದ್ದಾರೆ, ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿಕೊಂಡು ಇರುವ ಇತರೆ ಕಟ್ಟಡಗಳ ಬಗ್ಗೆಯು ಶೀಘ್ರದಲ್ಲೇ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ.
ಸಮಸ್ತ ಹಿಂದೂ ಸಮಾಜ ದಲಿತ ಸಮುದಾಯದ ಬೆಂಬಕ್ಕೆ ನಿಲ್ಲುತ್ತದೆ, ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಮುಂದೆ ಕಂಚಿನಡ್ಕದಲ್ಲಿ ಎರಡು ಪವಿತ್ರ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯೊಂದಿಗೆ ಸನಾತನ ಹಿಂದೂ ಧರ್ಮದ ಪುನರುತ್ಥಾನ ನಡೆದು ಕಂಚಿನಡ್ಕ ವಿಜೃಂಭಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಲೋಕೇಶ್ ಕಂಚಿನಡ್ಕ, ದಿನೇಶ್ ಕೋಟ್ಯಾನ್, ಸದಾಶಿವ ಕೋಟ್ಯಾನ್, ವಸಂತ ಪಾದೆಬೆಟ್ಟು, ಸಂತೋಷ್ ನಂಬಿಯಾರ್, ಶಂಕರ್ ನಂಬಿಯಾರ್, ಸುಜಿತ್ ಕಂಚಿನಡ್ಕ, ಶಂಕರ ಪಾನರ, ಸುವಾಸ್ ಶೆಟ್ಟಿ, ಗೋವಿಂದ ಕಂಚಿನಡ್ಕ, ರಮೇಶ್ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
