ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ತಂಬಾಕು ರಹಿತ ದಿನದಂದು ತಂಬಾಕು ಸೇವನೆ ವಿರುದ್ಧ ಜಾಗೃತಿ
ಕಾಪು : ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಶಿರ್ವ ಗ್ರಾಮ ಪಂಚಾಯತ್ ಮೇ 31ರಂದು ವಿಶಿಷ್ಟ ರೀತಿಯಲ್ಲಿ ತಂಬಾಕು ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.
ಬೆಳಗಿನ ಸಮಯದಲ್ಲಿ ಶಿರ್ವ ಪೇಟೆ ಪರಿಸರದಲ್ಲಿ ತಂಬಾಕು, ಗುಟ್ಕಾ ಇತ್ಯಾದಿಗಳನ್ನು ಸೇವಿಸುವವರಿಗೆ ಗುಲಾಬಿ ಹೂವನ್ನು ನೀಡಿ ತಂಬಾಕು ಪದಾರ್ಥಗಳನ್ನು ಸೇವಿಸದಂತೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ತಂಬಾಕು ಸೇವನೆ ಪರಿಸರಕ್ಕೆ ಹಾನಿಕರ ಎಂಬ ಈ ವರ್ಷದ ಘೋಷವಾಕ್ಯದ ಹಿನ್ನಲೆಯಲ್ಲಿ ತಂಬಾಕು ಸೇವಿಸಿ ಉಗುಳಿ ಪರಿಸರವನ್ನು ಹಾಳು ಮಾಡದಂತೆ, ಸ್ವಚ್ಚತೆಯನ್ನು ಕಾಪಾಡುವಂತೆ ಜಾಗೃತಿ ಮೂಡಿಸಲಾಯಿತು.
ಸುಮಾರು 15 ದಿನಗಳಿಂದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರ ನೇತೃತ್ವದಲ್ಲಿ ಶಿರ್ವ ಬಸ್ಸು ನಿಲ್ದಾಣ, ಪಂಚಾಯತ್ ಪರಿಸರ , ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಿ ಉಗುಳುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆ ಪ್ರಕಾರ ದಂಡ ವಿಧಿಸುವ ಕಾರ್ಯಚರಣೆ ನಡೆಯುತ್ತಿತ್ತು. ಆದರೆ ಇಂದು ಯಾವುದೇ ದಂಡವಿಧಿಸದೆ ಗುಲಾಬಿ ಹೂವನ್ನು ನೀಡಿ ತಂಬಾಕು ಸೇವಿಸದಂತೆ ಜಾಗೃತಿ ಮೂಡಿಸಲಾಯಿತು. ತಂಬಾಕು ವ್ಯಸನಿಯೋರ್ವರಿಗೆ ಗುಲಾಬಿ ನೀಡಿ ಮಾಹಿತಿ ತಿಳಿಸಿದಾಗ ಅವರಲ್ಲಿದ್ದ ತಂಬಾಕು ಪದಾರ್ಥಗಳನ್ನು ಬಸ್ಸು ನಿಲ್ದಾಣದಲ್ಲಿರಿಸಿದ ಕಸದ ಡಬ್ಬಿಗೆ ಬಿಸಾಡಿ ಇನ್ನು ಮುಂದೆ ತಂಬಾಕು ಸೇವಿಸಲಾರೆ ಎಂದು ಹೇಳಿದ ಪ್ರಸಂಗವೂ ನಡೆಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರೊಂದಿಗೆ ಪಂಚಾಯತ್ ಸಿಬ್ಬಂದಿಗಳಾದ ಕಿಶೋರ್, ರಕ್ಷಿತ್, ಯೋಗಿಶ್, ಅಮೃತ, ಸುಮಭಾಮ, ಶ್ವೇತ ಭಾಗವಹಿಸಿದ್ದರು.
