ಸಂಜೆಯ ಸವಿಯಲು ಬನ್ನಿ ಪ್ರವಾಸಿಗರ ಕುತೂಹಲ ಕೆರಳಿಸುವ ಇನ್ನಂಜೆಯ ರೆಂಜಲ ಬಂಡೆಗೆ
Thumbnail
ಉಡುಪಿ ಜಿಲ್ಲೆಯು ಧಾರ್ಮಿಕ ತೀರ್ಥಕ್ಷೇತ್ರಗಳಿಗೆ ಬಲು ಪ್ರಸಿದ್ಧಿ. ಧಾರ್ಮಿಕ ನೆಲೆಗಟ್ಟಿನೊಂದಿಗೆ, ತನ್ನ ಸಹಜ ಸೌಂದರ್ಯದಿಂದ ಮೈಮನಗಳನ್ನು ಸೂರೆಗೊಳ್ಳಬಲ್ಲ, ಅಷ್ಟೊಂದು ಜನಪ್ರಿಯವಲ್ಲದ, ಜನಜಂಗುಳಿಯಿಲ್ಲದ ತಾಣವೊಂದಿದೆ!! ಅದೇ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಅಜಿಲಕಾಡು ಬಳಿಯಿರುವ 'ರೆಂಜಲ' ಬಂಡೆ ಅರ್ಥಾತ್ "ಧನುಷ್ ತೀರ್ಥ". ಹಿಂದೆ ಈ ಬಂಡೆಯ ಸುತ್ತ ರಂಜದ ಹೂವಿನ ಮರಗಳು ಹೆಚ್ಚಾಗಿದ್ದ ಕಾರಣ ಜನರು ಆ ಹೆಸರು ಕೊಟ್ಟಿರಬಹುದು. ಸುಮಾರು 60 ರಿಂದ 70 ಅಡಿ ಎತ್ತರ,150 ಮೀಟರ್ ಉದ್ದ, 40-50 ಅಡಿ ಅಗಲವಾಗಿರುವ ಈ ಏಕಶಿಲಾ ರಚನೆ ಭೂಇತಿಹಾಸದ ಆರಂಭದ ಜ್ವಾಲಾಮುಖಿ ತಣಿದು ನಿರ್ಮಾಣವಾಗಿದೆ. ಇದರ ಮೇಲಿರುವ ಎಂದೂ ಬತ್ತದ ನೀರಿನ ಕೊಳ ಪ್ರಮುಖ ಆಕರ್ಷಣೆಯಾಗಿದೆ. ಧನುಷ್ ತೀರ್ಥವು ದಕ್ಷಿಣ, ಪಶ್ಚಿಮ ಹಾಗೂ ಉತ್ತರ ದಿಕ್ಕುಗಳಲ್ಲಿ ಇನ್ನಂಜೆ ಗ್ರಾಮದ ಮಡುಂಬು ಎಂಬ ಜನವಸತಿ ಪ್ರದೇಶದಿಂದಲೂ , ಪೂರ್ವ ಹಾಗೂ ಆಗ್ನೇಯದಲ್ಲಿ ಮಜೂರು ಗ್ರಾಮದ ಕಲ್ಲುಗುಡ್ಡೆಯೆಂಬ ಪ್ರದೇಶದಿಂದ ಸುತ್ತುವರಿಯಲ್ಪಟ್ಟಿದ್ದು , ಎರಡೂ ಗ್ರಾಮಗಳ ಗಡಿಭಾಗವಾಗಿದೆ. ತಾಲೂಕು ಕೇಂದ್ರವಾದ ಕಾಪುವಿನಿಂದ ಕೇವಲ 4.5 ಕಿ.ಮೀ ದೂರದಲ್ಲಿರುವ ಈ ಬಂಡೆ ಪುರಾತನ ಐತಿಹ್ಯಗಳು, ಸುಂದರ ಕೊಳ, ನಿಗೂಢ ಗುಹೆಗಳು, ಮನೊಹರ ಸೂರ್ಯೋದಯ, ಸೂರ್ಯಾಸ್ತ, ಹಸುರು ಕಾಡು,ಗದ್ದೆ,ತೋಟ,ನದಿಗಳ ವಿಹಂಗಮ ನೋಟಕ್ಕೆ ಪ್ರಸಿದ್ಧಿಯಾಗಿದೆ . ಕರಾವಳಿಯ ಪ್ರಾತಿನಿಧಿಕ ಸೊಬಗು ಇಲ್ಲಿ ಮೈಹೊದ್ದು ಮಲಗಿದೆ..! ಹಿನ್ನೆಲೆ/ಐತಿಹ್ಯ:- ಇತಿಹಾಸ ಪ್ರಸಿದ್ಧ ಕುಂಜಾರುಗಿರಿ ಕ್ಷೇತ್ರದೊಂದಿಗೆ ಈ ಸ್ಥಳವು ತಳುಕು ಹಾಕಿಕೊಂಡಿದ್ದು, ಅಲ್ಲಿ ಉಲ್ಲೇಖಗೊಳ್ಳುವ ಚತುರ್ತೀರ್ಥಗಳಾದ ಗಧಾ,ಬಾಣ,ಪರಶುತೀರ್ಥಗಳಲ್ಲಿ ಇದು ನಾಲ್ಕನೆಯದಾಗಿ ಧನುಷ್ ತೀರ್ಥವೆಂದೇ ಪ್ರಖ್ಯಾತ. ಹಿರಿಯರು ಹೇಳುವ ಐತಿಹ್ಯದ ಪ್ರಕಾರ ತುಂಬಾ ಹಿಂದೆ ದುರ್ಗಾದೇವಿಯು ಈ ಬಂಡೆಯ ಗುಡಿಯಲ್ಲಿ ನೆಲೆಸಿದ್ದು, ಮಹಾಪ್ರವಾಹ ಬಂದಾಗ ಒಂದು ಕಾಲನ್ನು ಇಲ್ಲೂ, ಮತ್ತೊಂದು ಕಾಲನ್ನು ಕುಂಜಾರಿನ ಬೆಟ್ಟದ ಮೇಲೂ ಇಟ್ಟು ಊರನ್ನು, ಜನರನ್ನು ಕಾಪಾಡಿದಳಂತೆ.. ! ಹಾಗೂ ಈ ಸ್ಥಳವನ್ನು ಬಿಟ್ಟು ಕುಂಜಾರುಗಿರಿಯಲ್ಲಿ ನೆಲೆಯೂರಿದಳಂತೆ..! ಇದಕ್ಕೆ ಸಾಕ್ಷಿಯಾಗಿ ಪಾದವನ್ನು ಹೋಲುವ ಗುರುತೊಂದನ್ನು ಜನ ತೋರಿಸುತ್ತಾರೆ. ಇದೇ ಕಥೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಶಿಲಾಗುರುತುಗಳಿದ್ದು, ಒಂದನ್ನು ತುಳಸಿಕಟ್ಟೆಯೆಂದೂ, ಮತ್ತೊಂದನ್ನು 'ಡೋಲು ಸರಿದ ಸ್ಥಳ'ವೆಂದೂ ಹಿಂದೆ ಗುರುತಿಸುತ್ತಿದ್ದರು. ಮಹಾಪ್ರವಾಹದಿಂದ ಪಾರಾಗಲು ಇಲ್ಲಿನ ಮೂಲನಿವಾಸಿ ಪರಿಶಿಷ್ಟ ಕೊರಗ ಸಮುದಾಯದ ಹಿರಿಯರೊಬ್ಬರು ತನ್ನ ಪತ್ನಿಯೊಂದಿಗೆ ಡೋಲಿನೊಳಗೆ ಕುಳಿತು ತೇಲಿದರಂತೆ ! ಇವು ಕಟ್ಟುಕಥೆಗಳೆಂದು ನಕ್ಕು ನಾವು ಸುಮ್ಮನಾಗುವಂತೆ ಇಲ್ಲ...! ಹಿಂದಿನ ಕಾಲದ ಹೆಚ್ಚಿನ ಐತಿಹ್ಯಗಳು ನಮ್ಮ ಪೂರ್ವಿಕರ ಸುಪ್ತಮನಸ್ಸಿನಾಳದಲ್ಲಿ ಗಟ್ಟಿಯಾಗಿ ಕೂತ ಪ್ರಾಚೀನ ಸ್ಮೃತಿಯ ಅನಾವರಣಗಳೇ ಆಗಿರುತ್ತವೆ! ಜಗತ್ತಿನ ಪ್ರತೀ ನಾಗರಿಕತೆಗಳಲ್ಲಿ, ಪುರಾಣಗಳಲ್ಲಿ ನಮಗೆ ಇಂತದ್ದೇ ಮಹಾಪ್ರವಾಹದ ಉಲ್ಲೇಖಗಳು ಮತ್ತೆ, ಮತ್ತೆ ಎದುರಾಗುತ್ತದೆ. ಉದಾಹರಣೆಗೆ ನೋಹ, ಮನು, ವಿಷ್ಣುವಿನ ಮತ್ಸ್ಯಾವತಾರ, ಪರಶುರಾಮರ ತುಳುನಾಡು ಮತ್ತು ಕೇರಳೋತ್ಪತ್ತಿಯ ಪ್ರಸಂಗಗಳು, ಅಟ್ಲಾಂಟಿಸ್ , ದ್ವಾರಕಾ ಮುಳುಗಡೆ, ಸಿಂಧೂ ಸರಸ್ವತಿ ಸಂಸ್ಕ್ರತಿಯ ಅವನತಿ ಇತ್ಯಾದಿ.ಇಲ್ಲಿರುವ ಶಿಲಾಗುರುತುಗಳು ಮಾನವನ ಪ್ರಾಗೈತಿಹಾಸಿಕ ಯುಗದ ಗುರುತುಗಳೂ ಆಗಿರಬಹುದೇನೋ ! ಇಲ್ಲಿಗೆ ಸ್ವಲ್ಪ ದೂರದ ಕಲ್ಲುಗುಡ್ಡೆ ಪ್ರದೇಶದಲ್ಲಿ ,ಅಜ್ಜಿಪಾದೆ' ಎಂಬ ಸ್ಥಳವೊಂದಿದ್ದು ಅಲ್ಲಿ ಕಲ್ಲುಗಳ ಒಂದು ರಾಶಿಯಿದೆ. ಅಲ್ಲಿನ ಹುಡುಗರು ವರ್ಷಕ್ಕೊಮ್ಮೆ ಆ ಕಲ್ಲಿಗೆ ದೋಸೆ ಎಡೆಯಿಟ್ಟು ನಂತರ ಹಂಚಿ ತಿನ್ನುವ ರೂಢಿಯನ್ನು ಪಾಲಿಸುತ್ತಾರೆ. ಆ ಕಲ್ಲುಗಳ ರಾಶಿ ಬೇರೇನೂ ಅಲ್ಲದೆ ಪ್ರಾಚೀನ ಶಿಲಾ ಸಂಸ್ಕೃತಿಯ ಕಾಲದ ಸಮಾಧಿಯಾಗಿರಬಹುದೆಂಬ ಊಹೆ ನನ್ನದು. ಈ ಬಂಡೆಯ ಮೇಲೆ ಹಿಂದೆ ಸಣ್ಣ ಗುಡಿ ಇದ್ದಿರಬೇಕು, ಇದಕ್ಕೆ ಸಾಕ್ಷಿಯಾಗಿ ಸುತ್ತಮುತ್ತ ಕೆಂಪು ಇಟ್ಟಿಗೆ ತುಂಡುಗಳು ಕಾಣ ಸಿಗುತ್ತವೆ. ಈ ಬಂಡೆಯ ಬುಡದಲ್ಲಿ ಸುತ್ತ ಹಲವಾರು ಗುಹೆಗಳಿವೆ. ಇವುಗಳು ಸಾಹಸಿಗಳ ಕುತೂಹಲ ಕೆರಳಿಸಬಲ್ಲವು. ಸಾಮಾನ್ಯವಾಗಿ ಎಲ್ಲರಿಗೂ ಕಾಣ ಸಿಗುವ ಸಣ್ಣಗುಹೆ ಪೂರ್ವ ದಿಕ್ಕಿನಲ್ಲಿ ತಾಳೆಹರುವಿನ ಕೆಳಗಿದೆ. ಇದನ್ನು ಸ್ಥಳೀಯವಾಗಿ "ಪಿಲಿತ ಮಾಟೆ" (ಹುಲಿಯ ಗುಹೆ) ಎಂದೇ ಗುರುತಿಸುತ್ತಾರೆ. ಒಂದು ಕಾಲದಲ್ಲಿ ಈ ಗುಹೆ ವಿಶಾಲವಾಗಿದ್ದಿರಬಹುದು. ಆದರೆ ಈಗ ಮುಳ್ಳುಹಂದಿಯ ಶಿಕಾರಿದಾರರು ಅದನ್ನು ನಿರಂತರ ಅಗೆದು,ಮುಚ್ಚಿ ಒಳಗೆ ಮಣ್ಣು ಸಂಗ್ರಹವಾಗಿದೆ. ಆದರೂ ಹತ್ತು ಜನ ಕೂರಬಹುದಾದಷ್ಟು ಜಾಗವಿದೆ. ಮಳೆಗಾಲದಲ್ಲಿ ಕೆಲವೊಮ್ಮೆ ಇದು ಜುಗಾರಿ ಕಟ್ಟೆಯಾಗಿ ಮಾರ್ಪಾಡಾಗುವುದೂ ಇದೆ. ಆದರೆ ಇದಕ್ಕಿಂತಲೂ ದೊಡ್ಡದಾದ ಎರಡು ಗುಹೆಗಳು ಹಾಗೂ ಅನೇಕ ಕಲ್ಲಾಸರೆಗಳು ಬಂಡೆಯ ಪಶ್ಚಿಮ ಬುಡದಲ್ಕಿ ಕುರುಚಲು ಕಾಡಿನ ಜಿಗ್ಗಿನೊಳಗಿದೆ. ಅವುಗಳಲ್ಲಿ ಆಲದಮರದ ಕೆಳಗಿರುವ ಗುಹೆ ಸುಮಾರು ವಿಶಾಲವಾಗಿದ್ದು 25 ಜನ ಕೂರಬಹುದಾದಷ್ಟು ಜಾಗವಿದೆ. ಈಗ ಇಲ್ಲಿಯೂ ಮಣ್ಣು-ಕಲ್ಲು ರಾಶಿ ಬಿದ್ದಿದೆ. ಇದು ಹಗಲಿನಲ್ಲೂ ಕಗ್ಗತ್ತಲಿನಿಂದ ಕೂಡಿದ್ದು ಅಸಂಖ್ಯಾತ ಸಣ್ಣ ಬಾವಲಿಗಳ ಹಾಗೂ ಮುಳ್ಳುಹಂದಿಗಳ ಆವಾಸವಾಗಿದೆ. ಒಳಗಿನಿಂದಲೇ ಮೇಲೇರಬಹುದಾದ ಎರಡು ಇಕ್ಕಟ್ಟಾದ ಸುರಂಗಗಳು ಕಾಣಸಿಗುತ್ತವೆ. ಇನ್ನೂ ಕೆಲವು ಸಣ್ಣ ಪುಟ್ಟ ಗುಹೆ-ಬಿಲಗಳು ನೈರುತ್ಯ ದಿಕ್ಕಿನಲ್ಲಿವೆ, ಕೇವಲ ಒಬ್ಬ ವ್ಯಕ್ತಿ ತೆವಳಿಕೊಂಡು ಹೋಗಬಹುದಾದಷ್ಟೇ ಇಕ್ಕಟ್ಟು. ಇಲ್ಲಿ ಹೆಬ್ಬಾವು,ನಾಗರಹಾವು,ಮುಳ್ಳುಹಂದಿ, ಕಾಡುಹಂದಿ, ಕಾಡುಬೆಕ್ಕು,ನವಿಲು,ನರಿ,ಮೊಲ,ಉಡಗಳು ಕೆಲವೊಮ್ಮೆ ಕಾಣಸಿಗುತ್ತವೆ. ಇಲ್ಲಿನ ಈಚಲು ಹಾಗೂ ತಾಳೆಮರಗಳಲ್ಲಿ ಪುನುಗುಬೆಕ್ಕು, ಪಾಮ್ ಸಿವೆಟ್ ಗಳು ರಾತ್ರಿ ಗೋಚರಿಸುತ್ತವೆ. ಅಪರೂಪಕ್ಕೆ ಚಿರತೆಗಳೂ ಪ್ರತ್ಯಕ್ಷವಾಗುವುದುಂಟು..! ಇಲ್ಲಿಗೆ ಸಮೀಪದ ಪಾಂಬೂರು,ಪಾದೂರಿನಲ್ಲಿ ಸುಮಾರು ಬಾರಿ ಚಿರತೆಗಳನ್ನು ಸೆರೆಹಿಡಿದುದನ್ನು ಸ್ಮರಿಸಬಹುದು. ಇಲ್ಲೂ ಕಳ್ಳ ಶಿಕಾರಿದಾರರ ಕಾಟ ಇದೆ. ಹಗಲು ಸಂಭಾವಿತರಂತೆ ನಮ್ಮ ನಿಮ್ಮೊಂದಿಗೇ ಇರುವ ಇವರು ಪ್ರಾಣಿಗಳ ದಾರಿ ಪತ್ತೆ ಹಚ್ಚಿ ಉರುಳು ಇಡೋದರಲ್ಲಿ, ಮುಳ್ಳುಹಂದಿಯ ಬಿಲ ಅಗೆಯೋದರಲ್ಲಿ, ಅಪರೂಪಕ್ಕೊಮ್ಮೆ ಅಕ್ರಮ ಕೋವಿಗಳೊಂದಿಗೆ ಗುಂಪಲ್ಲಿ ಕಾಡುಹಂದಿ ಹೊಡೆಯುದರಲ್ಲಿ ನಿಸ್ಸೀಮರು. ನಾವು ಸಣ್ಣವರಿದ್ದಾಗ ಇಲ್ಲಿ ಗಂಧದ ಮರಗಳು ಹೆಚ್ಚಾಗಿದ್ದವು, ಕ್ರಮೇಣ ಅವುಗಳನ್ನು ಯಾವ ರೀತಿ ಖಾಲಿ ಮಾಡಿದ್ರು ಅಂದ್ರೆ! ಇವತ್ತು ಮದ್ದಿಗೆ ಬೇಕೆಂದು ಹುಡುಕಿದರೂ ಒಂದೇ ಒಂದು ಗಂಧದ ಗಿಡ ಸಿಗುವುದಿಲ್ಲ. ನನ್ನ ಅಜ್ಜ,ಅಜ್ಜಿ ಹಾಗೂ ಹಿರಿಯರು ಹೇಳುತ್ತಿದ್ದ ಇಲ್ಲಿಯ ಬೇಟೆ ಹಾಗೂ ಕಳ್ಳ ಭಟ್ಟಿ ಸಾರಾಯಿ ಬೇಯಿಸುವವರ ಕಥೆಗಳು ಇನ್ನೂ ಕಾಡುತ್ತಿವೆ. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಕಾಡುಪ್ರಾಣಿಗಳು ವ್ಯಾಪಕವಾಗಿದ್ದವಂತೆ..! ಹುಲಿಗಳು ದನಗಳನ್ನು ಮೇಯುವಾಗ ಅಥವಾ ಕೆಲವೊಮ್ಮೆ ನೇರವಾಗಿ ಹಟ್ಟಿಗೇ ನುಗ್ಗಿ ಹಿಡಿಯುತ್ತಿದ್ದುವಂತೆ ! ಚಿರತೆ ಹಾಗೂ ಕತ್ತೆಕಿರುಬಗಳು ಹೆಚ್ಚಾಗಿ ನಾಯಿಗಳನ್ನು, ಕರುಗಳನ್ನು ಹೊತ್ತೊಯ್ಯುತ್ತಿದ್ದುವಂತೆ ! ಇಲ್ಲಿನ ಜನರು ಕಾಡು ಪ್ರಾಣಿಗಳಿಗೆ ಇಟ್ಟ ತುಳು ಹೆಸರುಗಳು ಉಲ್ಲೇಖನೀಯ, ಸಾಮಾನ್ಯ ಹುಲಿಗೆ 'ಪಿಲಿ', ಹೆಬ್ಬುಲಿಗೆ 'ಬಲಿಪೆ', ಚಿರತೆಗೆ 'ಚಿಟ್ಟೆಪಿಲಿ'(ಚುಕ್ಕೆಗಳಿಂದಾಗಿ), ಕತ್ತೆಕಿರುಬನಿಗೆ 'ನಾಯಿಪಿಲಿ'(ಅದರ ಆಕಾರ ನಾಯಿಯಂತೆ), ನಾವು ಸಣ್ಣವರಿದ್ದಾಗ ರಾತ್ರಿ ರಸ್ತೆಯಲ್ಲಿ ಜೋರಾಗಿ ಊಳಿಡುತ್ತಾ ಹೋಗುವ ಒಂಟಿ ಪ್ರಾಣಿಯೊಂದಿತ್ತು, ಅದನ್ನು ಜನರು "ಪಲ್ಲ್ ಕಲ್ಕುನಿ'(ತೋಳ ಊಳಿಡುವುದು) ಎನ್ನುತ್ತಿದ್ದರು. ಆ ಪ್ರಾಣಿ ತೋಳವೇ ಇರಬಹುದು, ಆದರೆ ನಾನು ಎಂದೂ ಅದನ್ನು ನೋಡಿದ್ದಿಲ್ಲ. ಜನರು ಅದನ್ನು ಹುಚ್ಚುಹಿಡಿದ ದೊಡ್ಡ ನರಿಯೆನ್ನುತ್ತಿದ್ದರು. ಕ್ರಮೇಣ ದಟ್ಟಕಾಡು ಕ್ಷೀಣಿಸಿತು, ಜನವಸತಿ ಹೆಚ್ಚಿತು ಮಾನವ-ವನ್ಯ ಪ್ರಾಣಿಗಳ ಸಂಘರ್ಷ ಆರಂಭಗೊಂಡಿತು, ಪ್ರಾಣಿಗಳು ಅರ್ಧ ತಿಂದು ಬಿಟ್ಟ ಆಹಾರಕ್ಕೆ ವಿಷವಿಕ್ಕಿ ಕಾಡು ಪ್ರಾಣಿಗಳ ಸಂಹಾರ ಮಾಡಲಾರಂಭಿಸಿದರು. ಹುಲಿಗಳು, ಕಿರುಬಗಳು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾದವು. ಸ್ವಾತಂತ್ರ್ಯಾನಂತರ ಇಲ್ಲಿನ ಕಾಡುಗಳಲ್ಲಿ ಮಾನವನ ಕಾರುಬಾರು ಆರಂಭವಾಯಿತು. ಅದುವೇ ಕಳ್ಳಭಟ್ಟಿ ಸಾರಾಯಿ ಬೇಯಿಸುವ ಕಾಯಕ. ಆ ಕಾಲದ ಕಳ್ಳ - ಪೊಲೀಸ್ ಕಣ್ಣಮುಚ್ಚಾಲೆಯ ಬಗ್ಗೆ ಅನೇಕ ರಸವತ್ತಾದ ರೋಚಕ ಕಥೆಗಳಿವೆ. ಆದರೆ ಅವುಗಳನ್ನು ಹೇಳಬಲ್ಲ ಒಂದಿಬ್ಬರು ಮಾತ್ರ ಈಗ ಉಳಿದಿದ್ದಾರೆ. ಆಗಿನ ಕಳ್ಳಭಟ್ಟಿ ದಂಧೆಗೆ ಸಾಕ್ಷಿಯಾಗಿ ಇವತ್ತಿಗೂ ಇಲ್ಲಿನ ಗುಹೆಗಳಲ್ಲಿ ಹಳೇ ಮಡಕೆಚೂರುಗಳು, ತಾಮ್ರ ಹಾಗೂ ರಬ್ಬರ್ ಪೈಪಿನ ಅವಶೇಷಗಳು ದೊರೆಯುತ್ತವೆ. ಈ ಬಂಡೆ ಮೇಲಿನ ಪ್ರಮುಖ ಆಕರ್ಷಣೆಯೇ ಸಣ್ಣ ಕೊಳ. ಅದುವೇ ಧನುಷ್ ತೀರ್ಥ. ಪೂರ್ವ ಪಶ್ಚಿಮಕ್ಕೆ ಸುಮಾರು 10 ರಿಂದ 12 ಮೀಟರ್ ಉದ್ದ , 4 .5 ಮೀಟರ್ ಅಗಲ ಹಾಗೂ 10 ಅಡಿಗಳಷ್ಟು ಆಳವಾಗಿದೆ. ಕೊಳದ ಕೆಳಗಿನಿಂದ ಸುರಂಗವಿದೆಯೆಂದು ಹೇಳುತ್ತಾರಾದರೂ , ನಾವು ಚಿಕ್ಕಂದಿನಿಂದಲೂ ಈ ಕೊಳದಲ್ಲಿ ಈಜಾಡಿ ಬೆಳೆದವರು, ಆಳಕ್ಕೆ ಮುಳುಗಿದವರು. ತಳದಲ್ಲಿ ಕೆಸರನ್ನಲ್ಲದೆ ಬೇರೇನೂ ಕಂಡಿಲ್ಲ. ಸುಮಾರು 15 ವರ್ಷಗಳ ಹಿಂದೆ ಒಮ್ಮೆ ಸ್ವಚ್ಛಗೊಳಿಸಲೆಂದು ನೀರು ಖಾಲಿ ಮಾಡಿ ಕೆಸರನ್ನು ಹೊರತೆಗೆದು ಬರಿದು ಮಾಡಿದ್ದರು. ಆಗ ಅಲ್ಲಿ ಯಾವುದೇ ಸುರಂಗ ಕಂಡುಬಂದಿಲ್ಲ. ಸ್ವಚ್ಛಗೊಳಿಸಿದವರಿಗೆ ಏನು ದೊರಕಿತೋ ? ಗೊತ್ತಿಲ್ಲ! ಸುಮಾರು ದಿನಗಳ ನಂತರ ನನಗೆ ಇದರ ಕೆಸರಿನಲ್ಲಿ ಸುಮಾರು ತಾಮ್ರದ ಹಳೆ ಹಾಗೂ ಹೊಸ ನಾಣ್ಯಗಳು ಪತ್ತೆಯಾದವು. ನನಗೆ ದೊರಕಿದ ನಾಣ್ಯಗಳಲ್ಲಿ ಅತ್ಯಂತ ಹಳೆಯದೆಂದರೆ 1836ರ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ಲಾಂಛನವಿರುವ ನಾಣ್ಯಗಳು, ಇನ್ನು ಕೆಲವು 1858ರ ನಂತರದ ರಾಣಿ ವಿಕ್ಟೋರಿಯಾ ಹಾಗೂ ಕಿಂಗ್ ಜಾರ್ಜ್ ಚಿತ್ರವಿರುವ ಬ್ರಿಟಿಷ್ ಇಂಡಿಯಾದ ನಾಣ್ಯಗಳು, ಮತ್ತೆ ಕೆಲವು ಸ್ವಾತಂತ್ರ್ಯ ಪೂರ್ವದವು ಹಾಗೂ ನಂತರದವು. ನಡು ಹಗಲಲ್ಲಿ ಬಂಡೆ ಕಾಯುವುದರಿಂದ ಕೊಳದ ನೀರು ಬೆಚ್ಚಗಾಗಿ ಮತ್ತೆ ತಣ್ಣಗಾಗುವುದರಿಂದ ಈ ನೀರಿನಲ್ಲಿ ಯಾವುದೇ ಮೀನುಗಳು ಬದುಕುವುದಿಲ್ಲ. ನಾವು ಚಿಕ್ಕಂದಿನಲ್ಲಿ ಇದರ ನೀರಿಗೆ ಮೀನು ತಂದು ಹಾಕುವ ಪ್ರಯತ್ನ ಮಾಡಿ ವಿಫಲರಾಗಿದ್ದೇವೆ. ಆದರೆ ಉಷ್ಣ ಹಾಗೂ ಶೀತಕ್ಕೆ ಹೊಂದಿಕೊಳ್ಳಬಲ್ಲ ಸಣ್ಣ ಹಾಗೂ ದೊಡ್ಡ ಕಪ್ಪೆಗಳು, ಪಾಚಿ, ಕೆಲವೊಮ್ಮೆ ಸಾಂದರ್ಭಿಕವಾಗಿ ನೀರು ಹಾವು ಕಂಡುಬರುತ್ತವೆ. ಕಡುಬೇಸಿಗೆಯಲ್ಲಿ ಮೂರು ನಾಲ್ಕು ಅಡಿ ನೀರು ಕಡಿಮೆಯಾದರೂ ಕೊಳದಲ್ಲಿ ವರ್ಷವಿಡೀ ನೀರು ಬತ್ತುವುದಿಲ್ಲ. ಕೆಸರು ತೆಗೆದ ವರ್ಷ ಮಾತ್ರ ಕೆಲವು ತಿಂಗಳು ಬರಿದಾಗಿತ್ತು. ಹಿಂದೆ ಇಲ್ಲಿಗೆ ಭೇಟಿ ಕೊಟ್ಟವರು ಕೊಳಕ್ಕೆ ನಾಣ್ಯವನ್ನು ಎಸೆಯುತ್ತಿದ್ದರು. ಈಗ ಆ ಪದ್ದತಿ ನಿಂತಿದೆ. ಮಳೆಗಾಲದಿಂದ ಹಿಡಿದು ಡಿಸೆಂಬರ್ ತನಕ ಇದರ ನೀರು ಸ್ನಾನಕ್ಕೆ ಯೋಗ್ಯವಾಗಿರುತ್ತದೆ. ಆನಂತರ ಇದು ಪಾಚಿಗಟ್ಟುವುದರಿಂದ ಬೇಸಿಗೆಯ ಅವಧಿಯಲ್ಲಿ ಸ್ನಾನ ಮಾಡಿದರೆ ಸ್ವಲ್ಪ ಮೈತುರಿಕೆ ಕಾಣಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ನಮಗೆ ಈ ಕೊಳದಲ್ಲಿ ಸ್ನಾನ ಮಾಡುವುದೆಂದರೆ ಖುಷಿಯೋ ಖುಷಿ ! ಶನಿವಾರ ಮಧ್ಯಾಹ್ನ ಶಾಲೆಯಿಂದ ಬಂದು ನೀರಿಗೆ ಸಮ್ಮರ್ ಸಾಲ್ಟ್ ಹೊಡೆಯುವುದೊಂದೇ ಗೊತ್ತು,.. ಹೊತ್ತು ಕಳೆದು ಕತ್ತಲಾಗುತ್ತಾ ಬಂದರೂ ಮನೆಗೆ ಹಿಂದಿರುಗುವ ಯೋಚನೆಯಿಲ್ಲ...ಮನೆಯಿಂದ ಕೋಲು ಹಿಡಿದು ಜನಬರಬೇಕಷ್ಟೇ....! ತದನಂತರವೇ ಸಕಲ ಮರ್ಯಾದೆ ಹಾಗೂ ಮಿಡಿಯುವ ಪಕ್ಕವಾದ್ಯಗಳೊಂದಿಗೆ ಮರಳಿ ಮನೆಗೆ ಬಿಜಯ ಮಾಡಿಸುವುದು..! ಆದರೆ ನೀವು ,ಜಾಗ್ರತೆ ! ಸರಿಯಾಗಿ ಈಜು ಬಾರದವರಿಗೆ ಆಳ ನೀರಿನ ಬಾವಿಯಂತಿರುವ ಈ ಕೊಳ ಬಲು ಅಪಾಯಕಾರಿ ! ಮಳೆಗಾಲದಲ್ಲಂತೂ ಕಾಲು ಜಾರುವುದರಿಂದ ಬಹಳ ಜಾಗ್ರತೆಯಿಂದಿರಬೇಕು. ಜನರ ನಂಬಿಕೆಯ ಪ್ರಕಾರ ಈಗಿರುವ ಕೊಳ ನಿಧಾನವಾಗಿ ಚಿಕ್ಕದಾಗುತ್ತಾ, ಕ್ರಮೇಣ ಮುಚ್ಚಿಹೋಗಿ ಹೊಸ ಕೊಳ ಹುಟ್ಟಿಕೊಳ್ಳುತ್ತಂತೆ! ಈ ನಂಬಿಕೆಗೆ ಕಾರಣವೇನೆಂದರೆ, ಕೊಳದ ಪಶ್ಚಿಮಕ್ಕೆ ಸಾಲು ಬಂಡೆಗಳ ಕೆಳಗೆ ನೀರು ನಿಲ್ಲದ, ಕೊಳವನ್ನೇ ಹೋಲುವ ಗುಂಡಿಯೊಂದಿದೆ. ಮಾತ್ರವಲ್ಲದೆ ಈಗ ನೀರಿರುವ ಕೊಳದ ಪಕ್ಕದಲ್ಲೇ ಇನ್ನೊಂದು ಸಣ್ಣ ಉರುಟಾದ ಗುಂಡಿ ಇರುವುದು ಕಾರಣವಿರಬಹುದು. ಹಿಂದೆ ಬಂಡೆಯ ತುದಿಗೆ ಹತ್ತಲು ಮೆಟ್ಟಿಲುಗಳೇ ಇರಲಿಲ್ಲ. ನಾವೆಲ್ಲರೂ ಚಿಕ್ಕಂದಿನಿಂದಲೂ ಬಲು ಸಾಹಸ ಮಾಡಿ , ಬೇರೆ ಬೇರೆ ದಿಕ್ಕುಗಳಿಂದ ಬಂಡೆ ಹತ್ತುತ್ತಿದ್ದೆವು. ಆದರೆ ಕೆಳಬರುವಾಗ ಹೆಚ್ಚು ಕಡಿಮೆ ಜಾರುಬಂಡಿಯಂತೆ ಜಾರುವುದರಿಂದ ನಮ್ಮ ಚಡ್ಡಿಯ ಹಿಂಭಾಗ ಯಾವಾಗಲೂ ಶ್ರೀಲಂಕಾ ನಕಾಶೆಯೇ! ಕ್ರಮೇಣ ಅಭ್ಯಾಸವಾಗಿ ಯಾವುದೇ ಮಳೆಗಾಲವಾದರೂ,ರಾತ್ರಿಯಲ್ಲೂ ,ಬೆಳಕಿಲ್ಲದೆಯೂ ಮೇಲಕ್ಕೆ ಹತ್ತುತ್ತಿದ್ದೆವು. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ, ಭಕ್ತರಿಗೆ ಹತ್ತಲು ತುಂಬಾ ಕಷ್ಟವಾಗುತ್ತಿತ್ತು. ಹಾಗಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿಯ ಮಠಾಧೀಶರ ಹಂಬಲ ಹಾಗೂ ಚೆನ್ನೈನ ಸೇವಾಸಂಸ್ಥೆಯವರ ದೇಣಿಗೆಯಿಂದ ಕಾಂಕ್ರೀಟ್ ಮೆಟ್ಟಿಲುಗಳನ್ನು ಹಾಕಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ. ಆದರೆ ನಾವು ಯಾವುದನ್ನೂ ಒಳ್ಳೆಯದಕ್ಕೆ ಬಳಸುವುದಿಲ್ಲ ನೋಡಿ ? ಮೆಟ್ಟಿಲುಗಳಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು.. ಜೊತೆಗೆ ಪ್ಲಾಸ್ಟಿಕ್, ಕಸ, ತಂಪು ಪಾನೀಯ , ಮದ್ಯ, ಬಿಯರ್ ಬಾಟಲ್ ಗಳೂ ರಾಶಿ ಬೀಳಲಾರಂಭಿಸಿದವು. ಕೆಳಗೆ ಪಂಚಾಯತಿಯ ಪ್ರಕಟಣೆಯಿದ್ದರೂ ಅದಕ್ಕೆ ಬೆಲೆಯಿಲ್ಲ! ಇಂತಹ ಪೂಜನೀಯ ಕ್ಷೇತ್ರದ ಬಂಡೆಯನ್ನೂ ಒಡೆದು ಹಣ ಮಾಡುವ ಪ್ರಯತ್ನಗಳು 60-70 ವರ್ಷಗಳ ಹಿಂದೆ ನಡೆದಿತ್ತು, ಬಂಡೆಯ ದಕ್ಷಿಣ ತುದಿಯದಲ್ಲಿ ಸ್ಫೋಟಿಸಲು ಮಾಡಿದ ಕುರುಹುಗಳು ಇಂದಿಗೂ ಕಂಡು ಬರುತ್ತವೆ, ಆದರೆ ಅದೇಕೋ ಕೆಲವು ಅಸಾಧಾರಣ ಕಾರಣಗಳಿಂದಾಗ ಈ ಬಂಡೆಯನ್ನು ಒಡೆಯುವುದು ಸಾಧ್ಯವಾಗಲೇ ಇಲ್ಲ! ಬಂಡೆ ಒಡೆಯುವ ಚಟುವಟಿಕೆ ಕೋಟ್ಲ ಬಂಡೆಗೆ ಸ್ಥಳಾಂತರಗೊಂಡು ಅಲ್ಲಿ ಅನೇಕ ವರ್ಷಗಳ ಕಾಲ ಸ್ಥಳೀಯರ ಸಾವು ನೋವುಗಳಿಗೆ ಕಾರಣವಾದುದು ಇನ್ನೊಂದು ಕಥೆ! ಇಲ್ಲಿನ ಬೇರೆ ಆಕರ್ಷಣೆಗಳೆಂದರೆ ಬಂಡೆಯ ತುದಿಯಲ್ಲಿ ಕಂಡುಬರುವ ಚಿತ್ತಾಕರ್ಷಕ ದೃಶ್ಯಗಳು, ಎಲ್ಲಾ ಕಾಲದಲ್ಲೂ ಬೀಸುವ ತಂಗಾಳಿ, ದೈವಿಕ ಅನುಭೂತಿ ನೀಡುವ ಸೂರ್ಯೋದಯ ಹಾಗೂ ಸೂರ್ಯಾಸ್ತಗಳು. ಉತ್ತರ ದಿಕ್ಕಿನಲ್ಲಿ ಕಂಡುಬರುವ ಕೋಟ್ಲು ಬಂಡೆ, ಇನ್ನಂಜೆ-ಶಂಕರಪುರದ ಕಾಡು ಹಾಗೂ ತೋಟಗಳು, ಅರಸೀಕಟ್ಟೆಯ ಶ್ರೀ ಮಾಧ್ವ ಇಂಜಿನಿಯರಿಂಗ್ ಕಾಲೇಜು. ಪೂರ್ವದಲ್ಲಿ ಬಂಡೆ ಕಲ್ಲುಗಳಿಂದಲೇ ಹೆಸರು ಪಡೆದಿರುವ ಕಲ್ಲುಗುಡ್ಡೆ, ಪಾದೂರಿನ ಭೂಗತ ಕಚ್ಛಾ ತೈಲ ಸಂಗ್ರಹಣಾಗಾರ , ಅದರ ಬೃಹತ್ ಕಲ್ಲಿನ ರಾಶಿ, ಇತ್ತೀಚೆಗೆ ತೈಲ ಸಂಗ್ರಹಣಾಗಾರದಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಚಿಮಿಣಿಯಿಂದ ಹೊರಹಾಕಿ ಆಗ್ಗಾಗ್ಗೆ ಸುಡುತ್ತಾರೆ , ಆಗ ಪೂರ್ವ ದಿಕ್ಕು ರಾತ್ರಿಗಳಲ್ಲೂ ಕೆಂಪಗೆ ,ಇಡೀ ಕಾಡಿಗೆ ಬೆಂಕಿ ಬಿದ್ದಂತೆ ಗೋಚರವಾಗುತ್ತದೆ. ದಕ್ಷಿಣದಲ್ಲಿ ಕರಂದಾಡಿ ಪರಿಸರ, ಜಲಂಚಾರು ದೇವಸ್ಥಾನ, ಕರಾವಳಿಯ ವಿಶಿಷ್ಟ ತೋಟದ ಮನೆಗಳು, ಎಲ್ಲೋ ದೂರದಲ್ಲಿ ಹೊಗೆಯುಗುಳುತ್ತಿರುವ ಯು.ಪಿ.ಸಿ,ಎಲ್ ಉಷ್ಣ ವಿದ್ಯುತ್ ಸ್ಥಾವರದ ಚಿಮಿಣಿ ಹಾಗೂ ಬಾಯ್ಲರ್ ಗಳು, ಪಶ್ಚಿಮಕ್ಕೆ ಮಡುಂಬು ಬೈಲಿನ ವಿಶಾಲ ಭತ್ತದ ಗದ್ದೆಗಳು, ಸುತ್ತಿಸುಳಿದು ಡೊಂಕಾಗಿ ಹರಿಯುವ ಪಾಂಗಾಳ ನದಿ, ಕೊಂಕಣದಿಂದ ಹಾದು ಕೇರಳ ಕಡೆಗೆ ಸಾಗುವ ರೈಲುಮಾರ್ಗ, ನಿರಂತರವಾಗಿ ಓಡಾಡುವ ಪ್ಯಾಸೆಂಜರ್ , ಗೂಡ್ಸ್, ಹಾಗೂ ಲಾರಿ ಹೊತ್ತ ರೋ ರೋ ರೈಲುಗಳು, ದೂರದಲ್ಲಿ ಕಾಪು ಪೇಟೆ, ಅದರಾಚೆ ದೀಪಸ್ತಂಭ, ಸದಾ ಕಾಡುವ ಕಡಲು ! ಮತ್ತಿನ್ನೇನು ಬಯಸುತ್ತೆ ಬಿಡಿ ನಮ್ಮ ಒಡಲು !! ಎಚ್ಚರಿಕೆ:- 1) ಈ ಸ್ಥಳವು ಪೂಜನೀಯ ಧಾರ್ಮಿಕ ಕ್ಷೇತ್ರವಾಗಿದ್ದು ಭಗದ್ಭಕ್ತರು, ನಿಸರ್ಗ ಪ್ರಿಯರು ಯಾವುದೇ ಸಮಯದಲ್ಲೂ ಸಂದರ್ಶಿಸಬಹುದು. ಪ್ರಾತಃ ಹಾಗೂ ಸಂಧ್ಯಾಕಾಲ ಅತ್ಯಂತ ಪ್ರಶಸ್ತ. 2) ಮೋಜು ಮಸ್ತಿ ಮಾಡಲು ಬರುವವರು, ಏಕಾಂತದಲ್ಲಿ ಪೊದೆಗೆ ನುಗ್ಗುವ ಪ್ರೇಮಿಗಳು ದಯವಿಟ್ಟು ದೂರವಿರಿ; ಕಾರಣ ಸ್ಥಳೀಯರಿಂದ ಧರ್ಮದೇಟು ಬೀಳುವ ಎಲ್ಲಾ ಸಂಭವವಿದೆ.(ಈಗಾಗಲೇ ಅನೇಕರು ಏಟು ತಿಂದ ನಿದರ್ಶನಗಳಿವೆ) 3)ಪ್ಲಾಸ್ಟಿಕ್ ಬಳಕೆ, ಮದ್ಯಪಾನ ,ಧೂಮಪಾನ,ತಂಬಾಕು, ಹಾಗೂ ಬಂಡೆಗಳ ಮೇಲೆ ಗೀಚುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 4)ಕೊಳ ಆಳವಾಗಿದ್ದು, ಸರಿಯಾಗಿ ಈಜು ಬಾರದವರು ಖಂಡಿತ ನೀರಿಗಿಳಿಯಬೇಡಿ. 5) ಬಂಡೆಯ ಕಡಿದಾದ ಇಳಿಜಾರು ತುಂಬಾ ಅಪಾಯಕಾರಿ, ಹಾಗಾಗಿ ಸೆಲ್ಫಿ ಹುಚ್ಚಾಟ ಬೇಡ. ಮಳೆಗಾಲದಲ್ಲಿ ತುಂಬಾ ಜಾಗ್ರತೆಯಾಗಿರಿ. 6) ಗುಹೆಗಳಿಗೆ ಏಕಾಂಗಿಯಾಗಿ ನುಗ್ಗಬೇಡಿ, ಈ ಪ್ರದೇಶದಲ್ಲಿ ವಿಷಪೂರಿತ ಹಾವುಗಳು,ಹೆಬ್ಬಾವು, ಕಾಡುಹಂದಿ, ಮುಳ್ಳುಹಂದಿ ಯಥೇಚ್ಛವಾಗಿವೆ.ಕೆಲವೊಮ್ಮೆ ಚಿರತೆಗಳೂ ಕಾಣಸಿಕ್ಕಿವೆ. 7) ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ. ಯಾವುದೇ ರೀತಿಯ ಬೇಟೆ ಶಿಕ್ಷಾರ್ಹ ಅಪರಾಧ. ತಲುಪುವುದು ಹೇಗೆ ? *ಧನುಷ್ ತೀರ್ಥವು ತಾಲೂಕು ಕೇಂದ್ರವಾದ ಕಾಪುವಿನಿಂದ 4.5 ಕಿ.ಮೀ ದೂರವಿದ್ದು ಬಂಟಕಲ್ ರಸ್ತೆಯಲ್ಲಿ ಮಡುಂಬು ಅಜಿಲಕಾಡುವಿನಿಂದ ಬಲಕ್ಕೆ 300 ಮೀಟರ್ ಕಚ್ಛಾರಸ್ತೆಯಲ್ಲಿ ಕ್ರಮಿಸಬೇಕು. *ಜಿಲ್ಲಾ ಕೇಂದ್ರವಾದ ಉಡುಪಿಯಿಂದ 14 ಕಿ.ಮೀ ದೂರವಿದ್ದು ಶಂಕರಪುರದಿಂದ ಇನ್ನಂಜೆ ಮಾರ್ಕೆಟ್ ರೋಡ್ ಮೂಲಕ ಮಡುಂಬು ಅಜಿಲಕಾಡು ತಲುಪಬಹುದು. *ಅದೇ ರೀತಿ ಬಂಟಕಲ್-ಕಾಪು ರಸ್ತೆ ಹಾಗೂ ಮಜೂರು-ಕರಂದಾಡಿ-ಕಲ್ಲುಗುಡ್ಡೆ ರಸ್ತೆಗಳ ಮೂಲಕವೂ ಅಜಿಲಕಾಡು ತಲುಪಬಹುದು *ಖಾಸಗಿ ವಾಹನಗಳಲ್ಲೇ ಬಂತರೆ ಉತ್ತಮ. ಟ್ಯಾಕ್ಸಿ,ಆಟೋ ಲಭ್ಯವಿದೆ. ಊಟ ವಸತಿ ವ್ಯವಸ್ಥೆಗೆ ಕಾಪು ಅನುಕೂಲಕರ. ಲೇಖಕರು:-ರಾಜೇಶ್ ಇನ್ನಂಜೆ email: rajeshinnanje58@gmail.com
21 May 2020, 01:31 PM
Category: Kaup
Tags: