NSCDF ಸಂಸ್ಕೃತಿ ಜಾತ್ರೆ - ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗಿದೆ : ಅರಳಿ ನಾಗರಾಜ್
ಮಂಗಳೂರು : ಪರಿಸರ ಅಂದರೆ ಗಿಡ ನೆಡುವುದು ನೀರು ಉಳಿಸುವುದು ಎಂದು ಭಾಷಣ ಮಾಡುತ್ತೇವೆ ಕಾರ್ಬನ ಡೈಆಕ್ಸೈಡ್ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು ಎಂದೆಲ್ಲ ಹೇಳಿಕೊಳ್ಳುತ್ತೇವೆಯೇ ಹೊರತು ಸಾಮಾಜಿಕ ಪರಿಸರ, ರಾಜಕೀಯ ಪರಿಸರ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇದು ಅತ್ಯಂತ ಖೇದಕರ ಸಂಗತಿ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು.
ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರ ಭವನದಲ್ಲಿ ಜುಲೈ ಮೂರರಂದು ಆಯೋಜಿಸಿದ್ದ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕೋವಿಡ್ ನಂತಹ ಪರಿಸ್ಥಿತಿಯಲ್ಲೂ ದೇಶ ಮುನ್ನಡೆದಿದೆ. ವಿದೇಶಗಳಿಗೆ ಔಷಧಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೇ ರೀತಿ ಬ್ರಷ್ಟಾಚಾರದಂತಹ ಪಿಡುಗು ಕೂಡಾ ವ್ಯಾಪಕವಾಗಿ ಹರಡಿಕೊಂಡಿದೆ. ಇಂದು ಪೂರ್ಣಾಂಕ ಪಡೆದ ಮಕ್ಕಳಿಗೆ ಮಾನ್ಯತೆ ಇಲ್ಲ. ಲಕ್ಷಾಂತರ ರುಪಾಯಿ ನೀಡಿ ಸೀಟು ಗಿಟ್ಟಿಸಿ ಕೊಂಡ ವಿದ್ಯಾರ್ಥಿಗಳು ಬಳಿಕ ಬ್ರಷ್ಟರಾಗದೆ ಇರುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಇದನ್ನ ತಡೆಯಬೇಕಾದರೆ ಇಂದಿನ ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿ ಪಾಡಿ ಮಾತನಾಡಿ NSCDF ಒಂದು ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ . ಈ ಕಾರಣದಿಂದಾಗಿಯೇ ಅವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಾಮಾಜಿಕ ವಿಜ್ಞಾನಿ ಡಾ. ಎಂ ಪಿ. ವರ್ಷ , ಸಾಹಿತ್ಯ ಕ್ಷೇತ್ರದಲ್ಲಿ ಪಿ.ವಿ.ಪ್ರದೀಪ್ ಕುಮಾರ್, ನೃತ್ಯ ಕ್ಷೇತ್ರದಲ್ಲಿ ಲಾಲಿತ್ಯ ಕುಮಾರ್ ಬೇಲೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕವಿಗೋಷ್ಠಿ ಅಧ್ಯಕ್ಷೆ ಉಪನ್ಯಾಸಕಿ ಮಾನ್ವಿ, ಕವಿಗೋಷ್ಟಿ ಸಂಚಾಲಕಿ ಮಾನಸ ಪ್ರವೀಣ್ ಭಟ್ ಉಪಸ್ಥಿತರಿದ್ದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ, ಯಕ್ಷಗಾನ ಹಾಗೂ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
