ಜನರಿಂದ ಜನರಿಗಾಗಿರುವ ಸಹಕಾರಿ ಬ್ಯಾಂಕುಗಳು ಸಾರ್ವಜನಿಕರ ಸೇವೆಗೆ ಸದಾ ಸಿದ್ಧ : ಡಾ| ಎಮ್.ಎನ್. ರಾಜೇಂದ್ರ ಕುಮಾರ್
ಪಡುಬಿದ್ರಿ : ಸಹಕಾರಿ ಕ್ಷೇತ್ರದ ಬ್ಯಾಂಕುಗಳು ನಮ್ಮಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ಅದರಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಕೂಡ ಒಂದಾಗಿದೆ. ನಮ್ಮವರೇ ಇರುವ ಸಹಕಾರಿ ಬ್ಯಾಂಕುಗಳನ್ನು ಬೆಳೆಸಬೇಕಾಗಿದೆ. ಹೊರ ರಾಜ್ಯದವರಿಂದ ಇಂದು ರಾಷ್ಟ್ರೀಕೃತ ಬ್ಯಾಂಕುಗಳು ತುಂಬಿದೆ. ಇಂತಹ ನಿಟ್ಟಿನಲ್ಲಿ ನಮ್ಮ ಯುವಜನಾಂಗ ಬ್ಯಾಂಕಿಂಗ್ ಕ್ಷೇತ್ರದತ್ತ ಗಮನಹರಿಸಬೇಕಾಗಿದೆ ಎಂದು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು.
ಅವರು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ) ಇದರ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನೆ, ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲೋಕಾರ್ಪಣೆಯ ನಂತರ ಪ್ರಧಾನ ಕಚೇರಿ ಸಹಕಾರ ಸಂಗಮ ಇಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಶೇ. 25 ಡಿವಿಡೆಂಟ್ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಬೆಳವಣಿಗೆಗೆ ಸಿಬ್ಬಂದಿ ವರ್ಗದ ಸೇವಾಮನೋಭಾವವೇ ಕಾರಣವಾಗಿದೆ. ಜನರಿಂದ ಜನರಿಗಾಗಿ ಇರುವ ಬ್ಯಾಂಕ್ ಸಹಕಾರಿ ಬ್ಯಾಂಕುಗಳು. ಜನಸಾಮಾನ್ಯರ ಆರ್ಥಿಕ ಸದೃಢತೆಗೆ ಸಹಕಾರಿ ಬ್ಯಾಂಕುಗಳು ಸಹಕಾರಿ. ಉಳ್ಳವರಿಗೆ ಮಣೆ ಹಾಕುವ, ನಮ್ಮ ಭಾಷೆ, ಸಂಸ್ಕೃತಿ ತಿಳಿಯದ ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳು ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿದೆ. ಈ ಸಂದರ್ಭ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 5 ಲಕ್ಷ ನೀಡುವುದಾಗಿ ಹೇಳಿದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ ಗ್ರಾಹಕರ ಬಗೆಗೆ ಇರುವ ಕಾಳಜಿಯನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಇತರ ಬ್ಯಾಂಕುಗಳು ಕಲಿಯಬೇಕಾಗಿದೆ. ರೈತರಿಗೆ ಬೇಕಾದ ಕೃಷಿ ಉಪಕರಣ, ಹಡಿಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಬೇಕಾದ ಅನಿವಾರ್ಯತೆಯಿದೆ. ಇದು ಸಹಕಾರಿ ಬ್ಯಾಂಕುಗಳಿಂದ ಮಾತ್ರ ಸಾಧ್ಯ. ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದಿಂದಾಗಿ ಸುಮಾರು 50,000 ಕುಟುಂಬ ವರ್ಗಗಳು, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ವಿವಿಧ ಸೇವೆಗಳ ಉದ್ಘಾಟನೆ, ಲೋಕಾರ್ಪಣೆ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯನ್ನು, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕೃಷಿ ಸಾಮಾಗ್ರಿಗಳ ಮಳಿಗೆ, ಉಡುಪಿ ಶಾಸಕರಾದ ರಘುಪತಿ ಭಟ್ ಭತ್ತದ ಕೃಷಿಗೆ ಸಹಾಯಧನ ವಿತರಣೆಯನ್ನು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಚಿನ್ನಾಭರಣ ಶುದ್ಧತೆ ಪರೀಕ್ಷಿಸುವ ಯಂತ್ರ ಉದ್ಘಾಟಿಸಿದರು. ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲೋಕಾರ್ಪಣೆ ಮಾಡಿದರು.
ಸನ್ಮಾನ, ಸಹಾಯ ಧನ ವಿತರಣೆ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್, ಕಾಪು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಸಹಕಾರಿ ರತ್ನ ಪುರಸ್ಕೃತ ಚಿತ್ತರಂಜನ್ ಬೋಳಾರ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿವೃತ್ತ ಉದ್ಯೋಗಿ ರವೀಂದ್ರ ರಾವ್, ಪಲಿಮಾರು ಪಂಚಾಯತ್ ತ್ಯಾಜ್ಯ ವಿಲೇವಾರಿ ವಾಹನ ಚಾಲಕ ಮಹೇಶ್, ಗುತ್ತಿಗೆದಾರರಾದ ಪ್ರಣಾಮ್ ಜಿ. ಶೆಟ್ಟಿ, ಮತ್ತು ಮೊಹಮ್ಮದ್ ಇಮ್ತಿಯಾಜ್, ಚಿನ್ನಾಭರಣ ಶುದ್ಧತೆ ಯಂತ್ರದ ಪ್ರದೀಪ್ ಕುಮಾರ್, ತಂತ್ರಾಂಶ ತಜ್ಞ ವೀರೇಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು. ಭತ್ತದ ಕೃಷಿಗೆ ಸಹಾಯಧನ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ಬಂಟಕಲ್ ರಾಮಕೃಷ್ಣ ಶರ್ಮ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿರ್ದೇಶಕರಾದ ವೈ.ಜಿ, ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ., ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್.ಅಮೀನ್, ಕುಸುಮಾ ಎಂ. ಕರ್ಕೇರ, ಮತ್ತು ಕಾಂಚನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಚಿತಾ ಪಿ.ಎಚ್., ಶಾಖಾ ವ್ಯವಸ್ಥಾಪಕಿ ಅನಸೂಯಾ ಶೆಣೈ ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು. ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು.
