ಪಡುಬಿದ್ರಿ : ಆಟಿದ ಲೇಸ್ ಕಾರ್ಯಕ್ರಮ
ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾಸಂಘದ ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪು ಇವರ ಆಶ್ರಯದಲ್ಲಿ ಜುಲೈ 17ರಂದು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಆಟಿದ ಲೇಸ್ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮವನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮತ್ತು ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಆಟಿಯ ತಿನಿಸುಗಳು ಮತ್ತು ಆಟಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಆ ಮೂಲಕ ಆಟಿಯ ಆಚರಣೆಯು ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಮಹಿಳೆಯರಿಗೆ ಆಷಾಢ ಮಾಸದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಈ ಸಂದರ್ಭ ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಇದರ ಅಧ್ಯಕ್ಷೆ ಸುಚರಿತ ಎಲ್ ಅಮೀನ್, ನಿಕಟಪೂರ್ವ ಅಧ್ಯಕ್ಷೆ ಚಿತ್ರಾಕ್ಷಿ ಕೆ ಕೋಟ್ಯಾನ್, ಶ್ರೀ ನಾರಾಯಣಗುರು ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ನಳಿನಿ ಜಯರಾಮ್, ಸರೋಜಿನಿ ಸಿ ಅಂಚನ್, ಜಯಂತಿ ಜಿ ಸುವರ್ಣ, ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಯುವವಾಹಿನಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿಶೇಷ ಆಹಾರಗಳನ್ನು ಉಣ ಬಡಿಸಲಾಯಿತು.
ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಅಧ್ಯಕ್ಷೆ ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೋಹಿಣಿ ವಂದಿಸಿದರು.
