ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ
Thumbnail
ಉಚ್ಚಿಲ : ಇಲ್ಲಿನ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ ನಡೆಯಿತು. ಹೋಬಳಿ ಮಟ್ಟದ ನಾಲ್ಕು ಶಾಲೆಗಳ ಎಂಟು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿತು. ಪಂದ್ಯಾಟವನ್ನು ಉಡುಪಿ ಟೌನ್ ಬ್ಯಾಂಕ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಖೋಖೋ ಪಂದ್ಯಾಟವು ಗ್ರಾಮೀಣ ಕ್ರೀಡೆಯಾಗಿದ್ದು, ವಿದ್ಯಾರ್ಥಿಗಳಿಂದ ಇಂತಹ ಹೆಚ್ಚಿನ ಕ್ರೀಡೆಗಳನ್ನು ಆಡಿಸುವ ಮೂಲಕ ನಮ್ಮ ನಾಡಿನ ಆಟಗಳನ್ನು ಉಳಿಸಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಸಂಚಾಲಕ ಗಂಗಾಧರ ಸುವರ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಗೆಲ್ಲುವ ಪ್ರಯತ್ನ ಮಾಡಿ ಎಂದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್‌ದಾಸ್ ಶೆಟ್ಟಿ, ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ, ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಿಎಸ್ ಆಚಾರ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸುರೇಶ್ ಕುಲಾಲ್ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.
27 Jul 2022, 05:23 PM
Category: Kaup
Tags: