ಪಡುಬಿದ್ರಿಯಲ್ಲಿ ಅನ್ಯಕೋಮಿನ ಯುವಕನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ : ಪೋಕ್ಸೋ ಪ್ರಕರಣ ದಾಖಲು
ಪಡುಬಿದ್ರಿ : ಅಪ್ರಾಪ್ತ ಬಾಲಕಿಯೋರ್ವಳನ್ನು ಸಾಮಾಜಿಕ ಜಾಲತಾಣದಲ್ಲಿ ಪುಸಲಾಯಿಸಿ ಆಕೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಪಡುಬಿದ್ರಿ ಮೂಲದ ಅನ್ಯ ಧರ್ಮದ ಯುವಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪಿ ಹೆಜಮಾಡಿ ಆಲಡೆ ಬಳಿಯ ಪ್ಲ್ಯಾಟ್ ನಿವಾಸಿ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಗೆ ಜ್ಯೂಸ್, ಬಟ್ಟೆ, ತಿಂಡಿಯ ಆಶೆ ತೋರಿಸಿ, ಹೆಜಮಾಡಿ ಮಾಜಿ ಗ್ರಾ.ಪಂ. ಸದಸ್ಯನ ಕಾರನ್ನು ಬಳಸಿಕೊಂಡು, ಆಕೆಯನ್ನು ಪಡುಬಿದ್ರಿಯ ಅಬ್ಬೇಡಿ ಪ್ರದೇಶದ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸಿದ್ದು, ಇದೀಗ ಅಟೋ ರಿಕ್ಷಾವೊಂದರಲ್ಲಿ ಆಕೆಯನ್ನು ಕುಳ್ಳಿರಿಸಿಕೊಂಡು ಕಂಚಿನಡ್ಕ ಪ್ರದೇಶದ ಇನ್ನೋರ್ವ ಅಪ್ರಾಪ್ತ ಬಾಲಕನನ್ನು ಸೇರಿಸಿಕೊಂಡು ಹೆಜಮಾಡಿಗೆ ಹೋಗುತ್ತಿದ್ದ ವೇಳೆ ಟೋಲ್ ಸಿಬ್ಬಂದಿಗಳು ಗಮನಿಸಿ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೋಲಿಸರು ಅವರ ಬೆನ್ನಟ್ಟಿ ಆತ ವಾಸವಿರುವ ಪ್ಲ್ಯಾಟ್ ಗೆ ಹೋದಾಗ ಆಕೆಯನ್ನು ಆ ಕಟ್ಟಡದ ಮೂರನೇ ಮಹಡಿಯ ಮೇಲಿನ ನೀರಿನ ಟ್ಯಾಂಕ್ ಎಡೆಯಲ್ಲಿ ಬಚ್ಚಿಡಲಾಗಿತ್ತು. ಅಲ್ಲಿಂದ ಆಕೆಯನ್ನು ರಕ್ಷಿಸಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಈ ವಿಚಾರ ತಿಳಿಯುತ್ತಿದಂತೆ ಆಕ್ರೋಶಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯ ಬಳಿ ಸೇರಿ ಆತನನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದಾಗ ಪೊಲೀಸರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ಸ್ಥಳಕ್ಕೆ ಆಗಮಿಸಿದ ಕಾಪು ವೃತ್ತ ನಿರೀಕ್ಷಕ ಪೂವಯ್ಯ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕಾನೂನಿನ ಅಡ್ಡಿಯಲ್ಲಿ ಯಾವ ರೀತಿಯ ಪ್ರಕರಣ ದಾಖಲಿಸಲು ಅವಕಾಶ ಇದೆಯೋ ಅದನ್ನು ಮಾಡಿಯೇ ಮಾಡುತ್ತೇವೆ ಎಂಬುದಾಗಿ ಭರವಸೆ ವ್ಯಕ್ತ ಪಡಿಸಿದಾಗ ಕಾರ್ಯಕರ್ತರು ತೆರಳಿದ್ದಾರೆ.
ಪೊಲೀಸರು ಆಕೆಯ ಮನೆಮಂದಿಯನ್ನು ಕರೆಯಿಸಿ ಬಳಿಕ ಆಕೆ ನೀಡಿದ ದೂರಿನಂತೆ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಅಪ್ರಾಪ್ತ ಬಾಲಕನೊಂದಿಗೆ ಕಾರ್ಕಳ ರಸ್ತೆಯಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಇಬ್ಬರನ್ನೂ ಅಟೋ ರಿಕ್ಷಾ ಸಹಿತ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾದ ಕಾರನ್ನು ಕೂಡಾ ಸೀಜ್ ಮಾಡಲಾಗಿದೆ.
