ಕಾವ್ಯವನ್ನು ಅನುಭವಿಸಿ ಬರೆದರೆ ಉತ್ತಮ ಕವನ ಬರುತ್ತೆ – ರೇಮಂಡ್ ಡಿ.ಕುನ್ಹ ತಾಕೊಡೆ
Thumbnail
ಮಂಗಳೂರು : ಪ್ರೇರಣಾತ್ಮಕವಾಗಿ ಬರೆಯುವ ಸಾಹಿತಿಗಳು ನಡು ನಡುವೆ ವಿರಾಮ ತೆಗೆದು ಕೊಂಡು ಅಭ್ಯಸಿಸಿ ಬರೆಯುವ ಹವ್ಯಾಸ ಇಟ್ಟುಕೊಳ್ಳಬೇಕು. ಆ ಮೂಲಕ ಒಂದು ಸೃಜನಾತ್ಮಕ ಸಾಹಿತ್ಯ ರಚಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರೇಮಂಡ್ ಡಿ.ಕುನ್ಹ ತಾಕೋಡೆ ಹೇಳಿದರು . ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಗಸ್ಟ್ 14ರಂದು ಮಂಗಳೂರಿನ ಕದ್ರಿ ಬಾಲಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ ಭಾರತಾಂಬೆಗೆ ಕನ್ನಡದಾರತಿ ಮತ್ತು ಸಾಧಕರಿಗೆ ಸನ್ಮಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗ ಸಂಘಟಕರು ಸಂಶೋಧಕರು ಮತ್ತು ಸಾಹಿತಿಗಳು ಈ ಮೂರು ವರ್ಗದವರಿಂದ ಸಾಹಿತ್ಯ ಸೇವೆ ನಡೀತಿದೆ. ಇದರಲ್ಲಿ ಸಾಹಿತಿಗಳು ಸಂಶೋಧನೆ ಮತ್ತು ಸಂಘಟನೆ ಮಾಡಿದ್ರೆ ಉತ್ತಮ ಸಾಹಿತ್ಯ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಝಲ್ ಕವಿ ಹಾಗೂ ಮುಕ್ತಕ ಕವಿ ಎಂದೇ ಜನಪ್ರಿಯರಾದ ಡಾ. ಸುರೇಶ್ ನೆಗಳಗುಳಿ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಕವಿತೆ ಕಟ್ಟುತ್ತಾ ಹೋದಂತೆ ಅದು ಹುಟ್ಟುವುದು, ಕವನವನ್ನು ಮೊದಲ ಬಾರಿಗೆ ಓದಿದಾಗ ಎಲ್ಲಾ ಅರ್ಥವಾಗದೆ ಮರಳಿ ಓದಿಸಬೇಕು. ಹಾಗೆಂದು ಕವನಗಳು ಅರ್ಥ ಮಾಡಲು ತುಂಬಾ ಕಷ್ಟವಾಗಿರಲೂಬಾರದು. ಕವಿಗಳು ನಿರಂತರ ಅಧ್ಯಯನ ಮಾಡುತ್ತಿರಬೇಕು , ಶಬ್ಧ ಸಂಪತ್ತನ್ನು ಗಳಿಸಿ ಜೀವನಾನುಭವ ಹೊಂದಿರಬೇಕೆಂದು ಹೇಳಿದರು. ಕೆ ಎಸ್ ಎಸ್ ಎ ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಎನ್ ಎಸ್ ಸಿ ಡಿ ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಾಗೂ ಕವಯತ್ರಿ ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು. ರೇಶ್ಮಾ ಶೆಟ್ಟಿ ಗೋರೂರು ನಿರೂಪಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೀತ ಗಾಯನ ನಡೆಯಿತು.
15 Aug 2022, 12:56 PM
Category: Kaup
Tags: