ಶಿರ್ವ : ಸುನೀಲ್ ಮಿಶ್ರಾಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ
Thumbnail
ಶಿರ್ವ : ಕರ್ನಾಟಕ ಲಲಿತಕಲಾ ಅಕಾಡೆಮಿಯ ೨೦೨೧-೨೨ನೇ ಸಾಲಿನ ಪ್ರಶಸ್ತಿಗೆ ಶಿರ್ವದ ಯುವ ಚಿತ್ರ ಕಲಾವಿದ ಸುನೀಲ್ ಮಿಶ್ರಾ ಆಯ್ಕೆಯಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಸಂಭ್ರಮದ ಆಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿಯು ೨೫ ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಇವರ ಕಲಾಕೃತಿ ಹಾಗೂ ಪ್ರಶಸ್ತಿ ವಿಜೇತರಾದ ನಾಡಿನ ಇತರ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇಡಲಾಗಿದ್ದು, ಬಳಿಕ ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ಸ್೯ನಲ್ಲಿ ಪ್ರದರ್ಶನಗೊಳ್ಳಲಿದೆ. ಒಟ್ಟು ೮೫ ಕಲಾಕೃತಿಗಳ ಪೈಕಿ ಸುನೀಲ್ ಮಿಶ್ರಾ ಅವರ ಕಲಾಕೃತಿ ಸೇರಿದಂತೆ ೧೦ ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಕಲಾವಿದ, ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಬಿ. ಭಾಸ್ಕರನ್, ಹಿರಿಯ ಬರಹಗಾರ, ವಿಮರ್ಶಕ ಎಸ್.ದಿವಾಕರ್, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ, ರಿಜಿಸ್ಟಾçರ್ ಆರ್. ಚಂದ್ರಶೇಖರ್ ಮತ್ತು ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ. ಟಿ. ನಿಟ್ಟಾಲಿ ಉಪಸ್ಥಿತರಿದ್ದರು. ಸುನೀಲ್ ಮಿಶ್ರಾ ಅವರ ಕಂಚಿನ ಕಲಾಕೃತಿ ( ಹ್ಯೂಮನ್ ಮಾನ್ಯುಮೆಂಟ್ಸ್ ಫಾರ್ ಸೇಲ್) ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ೨೦೧೯ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಕ್ಕೆ ಆಯ್ಕೆಯಾಗಿತ್ತು. ೨೦೧೬ರಲ್ಲಿ ಯುನೆಸ್ಕೋ ವತಿಯಿಂದ ನಡೆದ ಇಂಟರ್‌ನ್ಯಾಷನಲ್ ಆರ್ಟ್ವೀಕ್ ಪ್ರದರ್ಶನದಲ್ಲಿ ಭಾಗವಹಿಸಿರುವುದಲ್ಲದೆ, ಅವರ ಕಲಾಕೃತಿ ಯುನೆಸ್ಕೋ ಮೂಲ ಸಂಸ್ಥೆಗೆ ಆಯ್ಕೆಯಾಗಿತ್ತು. ಬೆಂಗಳೂರು ಮಹಾನಗರದಲ್ಲಿದ್ದುಕೊಂಡು ಚಿತ್ರಕಲೆಯನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿರಿಸಿ ಕೊಂಡಿರುವ ಸುನೀಲ್ ಮಿಶ್ರಾ ಉಡುಪಿ ಜಿಲ್ಲೆಯ ಶಿರ್ವದಂತಹ ಗ್ರಾಮೀಣ ಪ್ರದೇಶದಲ್ಲಿ ಅರಳಿದ ಅಪ್ಪಟ ಗ್ರಾಮೀಣ ಪ್ರತಿಭೆ. ವಿದ್ಯಾರ್ಥಿ ದೆಸೆಯಿಂದಲೇ ಏಕವ್ಯಕ್ತಿ ಕಲಾ ಪ್ರದರ್ಶನ, ಗುಂಪು ಪ್ರದರ್ಶನ ನಡೆಸಿ ಯಶಸ್ವಿಯಾದ ಅವರು ರೇಖಾ ಚಿತ್ರ, ಶಿಲ್ಪಕಲೆ, ತೈಲವರ್ಣ, ಕಾಷ್ಠಶಿಲ್ಪ, ಟರ‍್ರಾ ಕೋಟಾ, ಮುಖವಾಡ ತಯಾರಿಕೆ, ಅಕ್ರಿಲಿಕ್ ಮಾಧ್ಯಮ, ಲೋಹ ಶಿಲ್ಪ (ಮಿಶ್ರಲೋಹ) ರಚಿಸುವುದರಲ್ಲಿ ಸಿದ್ಧ ಹಸ್ತರೆನಿಸಿಕೊಂಡಿದ್ದಾರೆ. ಶಿರ್ವದ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ , ಶಿರ್ವ ಸಂತ ಮೇರಿ ಶಿಕ್ಷಣಸಂಸ್ಥೆಯಲ್ಲಿ ಪ.ಪೂ.ಶಿಕ್ಷಣ ಪಡೆದು, ಉಡುಪಿಯ ಸಿ.ಕೆ.ಎಂ ಕಲಾಶಾಲೆಯಲ್ಲಿ ಕಲಾ ವ್ಯಾಸಂಗ ಮಾಡಿದ್ದರು. ಕೆಲಕಾಲ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
27 Aug 2022, 07:41 AM
Category: Kaup
Tags: