ಅದಮಾರು :ಶಾಲೆಗೆ ಸಿಡಿಲು ಬಡಿದು ಲಕ್ಷಾಂತರ ರೂ. ನಷ್ಟ
ಅದಮಾರು : ಇಲ್ಲಿನ ೯೮ ವರ್ಷ ಪೂರೈಸಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಬುಧವಾರ ಚೌತಿ ಪ್ರಯುಕ್ತ ರಜೆ ಇದ್ದ ಕಾರಣ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಹಿಂಬದಿಯ ಗೋಡೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ವಿದ್ಯುತ್ ವಯರಿಂಗ್, ಸಿ ಸಿ ಕ್ಯಾಮರಾ, ಇನ್‌ವರ್ಟರ್, ಅಕ್ವಾಗಾರ್ಡ್ ಸಹಿತ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ನೀರಿನ ನಳ್ಳಿಗೆ ಹಾನಿ ಉಂಟಾಗಿ ಶಾಲೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿ ಮದ್ಯಾಹ್ನದ ಬಿಸಿಯೂಟ ಮಾಡುವಂತಿಲ್ಲ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿಯವರು ದೂರವಾಣಿಯ ಮೂಲಕ ವಿದ್ಯಾಂಗ ಇಲಾಖಾಧಿಕಾರಿ ಶಂಕರ ಸುವರ್ಣರವರನ್ನು ಸಂಪರ್ಕಿಸಿ, ಸಮಗ್ರ ಮಾಹಿತಿ ನೀಡಿದರು. ಅಧಿಕಾರಿಯವರು ಗುರುವಾರ ಶಾಲೆಗೆ ರಜೆ ಘೋಷಿಸಿದ್ದಾರೆ.
ಸ್ಥಳೀಯರಾದ ಸದಾನಂದ ಆಚಾರ್ಯರವರು ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಎಲ್ಲೂರು ಗ್ರಾಮಕರಣಿಕ ಸುನಿಲ್ ಭೇಟಿ ನೀಡಿ ನಷ್ಟದ ಅಂದಾಜನ್ನು ಕಾಪು ತಹಶಿಲ್ದಾರ್ ಅವರಿಗೆ ಕಳುಹಿಸಿದ್ದಾರೆ.
ಈ ಸಂದರ್ಭ ಮುಖ್ಯ ಶಿಕ್ಷಕಿ ದೇವಿಕಾ, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಕುಂಜೂರು, ಸ್ಥಳೀಯರಾದ ಸಂತೋಷ್ ಶೆಟ್ಟಿ ಬರ್ಪಾಣಿ, ಮತ್ತಿತರರು ಉಪಸ್ಥಿತರಿದ್ದರು.
