ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣಗುರುವರ್ಯರ ಜನ್ಮದಿನೋತ್ಸವ ಆಚರಣೆ ; ಶೋಭಾಯಾತ್ರೆ ; ವಿದ್ಯಾರ್ಥಿವೇತನ ವಿತರಣೆ
Thumbnail
ಪಡುಬಿದ್ರಿ : ವಿದ್ಯೆಗೆ ಮಹತ್ವ ನೀಡುವುದರ ಜೊತೆಗೆ ಪ್ರತಿಭೆಗಳನ್ನು ಬೆಳೆಸಬೇಕಾಗಿದೆ. ಹೆತ್ತವರು ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಬೇಕಿದೆ. ನಾವು ಉತ್ತಮ ಸಂಸ್ಕೃತಿವಂತರಾಗಿ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ತಿಳಿಸುವ ಎಂದು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನೋತ್ಸವದ ಶೋಭಾಯಾತ್ರೆಯ ನಂತರ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಿಲ್ಲವ ಸಮಾಜ ಇಂದು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮುಂದೆಯು ನಿಮ್ಮ ಪ್ರಗತಿ ಹೀಗೆಯೇ ಇರಲಿ. ಬ್ರಹ್ಮಶ್ರೀ ನಾರಾಯಣಗುರುಗಳು ಸರ್ವರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳು ಮಾತನಾಡಿ ನಾರಾಯಣಗುರುಗಳ ಆದರ್ಶವನ್ನು ಪಾಲಿಸುವ. ಅವರು ಸಮಸ್ತ ಹಿಂದುಳಿದ ವರ್ಗದ ಗುರುಗಳು. ಅವರ ತತ್ವಗಳನ್ನು ಜೀವನದಲ್ಲಿಯೂ ಅಳವಡಿಸುವ. ಇಂತಹ ಆಚರಣೆಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎಂದರು. ವಿದ್ಯಾರ್ಥಿವೇತನ, ಬಹುಮಾನ ವಿತರಣೆ, ಸನ್ಮಾನ : ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಂಘದ ವ್ಯಾಪ್ತಿಯ ಸಮಾಜ ಬಾಂಧವರಿಗಾಗಿ ಜರಗಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರು ಮೂರ್ತಿ ಮೆರವಣಿಗೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯ ಸೇವಾಕರ್ತರಾದ ಸುಧೀರ್ ಎಸ್ ಕಲ್ಮಾಡಿ ಮತ್ತು ಗೀತಾ ದಂಪತಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ವಹಿಸಿದ್ದರು. ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷಣ್ ಡಿ ಪೂಜಾರಿ, ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ಮಹಿಳಾ ವಿಭಾಗದ ಅಧ್ಯಕ್ಷರಾದ ಸುಚರಿತ ಎಲ್ ಅಮೀನ್, ಬಿಲ್ಲವ ಸಂಘ, ಮಹಿಳಾ ವಿಭಾಗ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಸುಜಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಲಕ್ಷ್ಮಣ ಡಿ ಪೂಜಾರಿ ವಂದಿಸಿದರು. ನಾರಾಯಣಗುರುಗಳ ಜನ್ಮದಿನೋತ್ಸವದ ಪ್ರಯುಕ್ತ ಬೆಳಗ್ಗೆ ಪೂಜಾ ಕೈಂಕರ್ಯ ಮತ್ತು ಬಿಲ್ಲವ ಸಂಘದ ಮಹಿಳಾ ವಿಭಾಗದವರಿಂದ ಭಜನಾ ಸೇವೆಯು ಜರಗಿತು. ಸಂಜೆ ಶೋಭಾಯಾತ್ರೆ, ಮಹಾಪೂಜೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
Additional image Additional image Additional image
10 Sep 2022, 10:48 PM
Category: Kaup
Tags: