ಬರೋಬ್ಬರಿ 50 ಬಾರಿ ರಕ್ತದಾನ ಮಾಡಿದ ಕಾಪು ಕ್ಷೇತ್ರದ ರಾಘವೇಂದ್ರ ಪ್ರಭು
Thumbnail
ರಕ್ತದಾನ ಮಹಾದಾನ ಎಂಬ ನಂಬಿಕೆಯೊಂದಿಗೆ ಸತತವಾಗಿ ರಕ್ತದಾನ ಮಾಡುತ್ತಿರುವ ವೈದ್ಯಕೀಯ ಪ್ರತಿನಿಧಿ ಯುವಕನೊಬ್ಬ 50 ಬಾರಿ ರಕ್ತದಾನ ಮಾಡಿ ಪರರ ಜೀವ ಉಳಿಸಲು ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಡುಬೆಳ್ಳೆ ಅಲೆವೂರು ಸಮೀಪದ ಕರ್ವಾಲಿನ ಗ್ರಾಮೀಣ ಪ್ರದೇಶದ ಯುವಕ ರಾಘವೇಂದ್ರ ಪ್ರಭು ಕರ್ವಾಲು ಅವರೇ ಈ ಮಹಾದಾನಿಯೆನಿಸಿದ್ದಾರೆ. ರಕ್ತದಾನಕ್ಕೆ ಪರ್ಯಾಯವಿಲ್ಲ ಹಾಗಾಗಿ ಸಮಾಜದಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಸ್ಪಂದಿಸಿ ರಕ್ತ ನೀಡುವ ಪರಿಪಾಠವನ್ನು ಕಾಲೇಜು ದಿನಗಳಿಂದಲೇ ಇವರು ಮೈಗೂಡಿಸಿಕೊಂಡಿದ್ದಾರೆ. ರಾಘವೇಂದ್ರ ಅವರು ಪ್ರಸ್ತುತ ವರ್ಷಕ್ಕೆ ಮೂರು-ನಾಲ್ಕು ಬಾರಿ ರಕ್ತದಾನ ಮಾಡುವುದು ಮಾತ್ರವಲ್ಲದೆ ಅನೇಕ ಸಮಾಜ ಸೇವಾ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ಸತತವಾಗಿ ಜನಜಾಗೃತಿ ಶಿಬಿರಗಳನ್ನೂ ಆಯೋಜಿಸಿ ರಕ್ತದಾನದ ಮಹತ್ವವನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿ ಈ ಬಗ್ಗೆ ಪ್ರಚೋದನೆಯನ್ನೂ ನೀಡುತ್ತಾರೆ. ಉಡುಪಿ ತಾಲೂಕಿನಾದ್ಯಂತ ಸುಮಾರು 12 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿರುವ ರಾಘವೇಂಧ್ರ ಪ್ರಭು ಅವರು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯಿಂದ ಅತ್ಯುತ್ತಮ ರಕ್ತದಾನಿ ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಜೆಸಿಐ ಸಂಸ್ಥೆಯ ಮೂಲಕ ವಲಯ ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ. ಕಾಲೇಜಿನ ದಿನಗಳಲ್ಲಿ ಎನ್‍ಎಸ್‍ಎಸ್ ಘಟಕದಲ್ಲಿ ಸಕ್ರೀಯರಾಗಿದ್ದಾಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡಿದ್ದ ರಾಘವೇಂದ್ರ ಪ್ರಭು ಅವರು, ಅಂದಿನಿಂದ ಇಂದಿನವರೆಗೆ ಸತತವಾಗಿ ರಕ್ತದಾನ ಮಾಡುತ್ತಾ ಅನೇಕರ ಜೀವ ಉಳಿಸಲು ನೆರವಾಗಿದ್ದಾರೆ. ನಾನು ಮತ್ತೊಬ್ಬರಿಗೆ ಸಹಾಯ ಮಾಡಲು ರಕ್ತದಾನ ಮಾಡುವುದೇ ವಿನಃ ಯಾವುದೇ ದಾಖಲೆ ಮಾಡುವ ಉದ್ಧೇಶವಿಲ್ಲ ಎಂಬ ಧನ್ಯತಾಭಾವ ರಾಘವೇಂದ್ರ ಪ್ರಭು ಅವರದ್ದಾಗಿದೆ.
11 Jun 2020, 10:02 PM
Category: Kaup
Tags: