ಉಚ್ಚಿಲ ಅಪಘಾತ : ಅಪ್ಪ, ಮಗನ ಬಲಿ ಪಡೆದ ಲಾರಿಯ ಚಾಲಕ 16 ವರ್ಷದ ಬಾಲಕ !
ಉಚ್ಚಿಲ : ಅಪ್ಪ ಮತ್ತು ಮಗನ ಸಾವಿಗೆ ಕಾರಣವಾಗಿ ಅಪಘಾತ ಎಸಗಿ ಪರಾರಿಯಾದ 14 ಚಕ್ರದ ಲಾರಿಯನ್ನು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಬಗ್ಗೆ ಆಘಾತಕಾರಿ ಸುದ್ದಿ ಪೋಲಿಸರಿಂದ ತಿಳಿದು ಬಂದಿದೆ.
ರಾತ್ರಿ ಇಡೀ ಬಾಲಕ ಲಾರಿಯನ್ನು ಚಲಾಯಿಸಿದ್ದು, ಬಳಿಕ ಬಾಲಕನು ಡಿವೈಡರ್ ಮೇಲೆ ಲಾರಿಯನ್ನು ಹತ್ತಿಸಿ ಕಂಬಕ್ಕೆ ಢಿಕ್ಕಿ ಹೊಡೆದು ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ಬಳಿಕ ನಿಲ್ಲಿಸಿ ಚಾಲಕ ಶೇಖರ್‌ಗೆ ವಿಷಯವನ್ನು ತಿಳಿಸಿದ್ದ.
ನಿದ್ದೆಯ ಮಂಪರಿನಲ್ಲಿದ್ದ ಬಾಲಕನಿಗೆ ತಾನು ರಸ್ತೆ ಬದಿಯಲ್ಲಿನ ಮಣ್ಣು ರಸ್ತೆಯಲ್ಲಿ ನಿಂತಿದ್ದ ತಂದೆ-ಮಗನಿಗೆ ಢಿಕ್ಕಿಯಾದ ಬಗ್ಗೆ ಅರಿವಿಗೇ ಬಂದಿರಲಿಲ್ಲ.
ಚಾಲಕ ಶೇಖರ್‌ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಆತನ ತಂದೆಯ ಆಗಮನದ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.
ಚಾಲಕ ಶೇಖರ್‌ನ ಚಾಲನ ಪರವಾನಿಗೆಯನ್ನು ಹಾಗೂ ಗೂಡ್ಸ್ ಸಾಗಾಟದ ಏಜೆನ್ಸಿಯನ್ನೂ ರದ್ದು ಗೊಳಿಸಲು ಪೊಲೀಸರು ಕ್ರಮ ಕೈಗೊಂಡಿರುವುದಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕಾಪು ಸಿಪಿಐ ಪೂವಯ್ಯ ತಿಳಿಸಿದ್ದಾರೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿನ ಉಚ್ಚಿಲದಲ್ಲಿ ಎರಡು ಕಿಲೋಮಿಟರ್ ಉದ್ದದ ಸರ್ವಿಸ್ ರಸ್ತೆಯ ಕಾಮಗಾರಿ ಮೂರು ವರ್ಷಗಳಿಂದ ಪೂರ್ತಿಯಾಗದೆ ಉಳಿದಿವೆ. ಇಲ್ಲಿ ಸಂಭವಿಸುವ ಯಾವುದೇ ಹೆದ್ದಾರಿ ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ನವಯುಗ ನಿರ್ಮಾಣ ಕಂಪೆನಿಯನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
