ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ 1.26 ಕೋಟಿ ರೂ. ಲಾಭ ; ಶೇ. 25 ಡಿವಿಡೆಂಡ್
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) 2021-22ನೇ ಸಾಲಿಗೆ ವಾರ್ಷಿಕ 1.26 ಕೋಟಿ ರೂ. ವ್ಯವಹಾರಿಕ ಲಾಭ ದಾಖಲಿಸಿದ್ದು, ಈ ಬಾರಿಯೂ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಶನಿವಾರ ಪಡುಬಿದ್ರಿ ಸಹಕಾರ ಸಂಗಮದ ವೈ ಲಕ್ಷ್ಮಣ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಸಂಘದ ಸಾಲ ವಸೂಲಾತಿಯು ಶೇ. 96.02ರಷ್ಟು ಆಗಿದೆ. ಸಂಘವು ಶತಕೋಟಿ ಠೇವಣಿ ಸಂಗ್ರಹಿಸಿದ್ದು, ಮುಂದಿನ ವರ್ಷದಲ್ಲಿ ಪಲಿಮಾರು ಹಾಗೂ ಹೆಜಮಾಡಿ ಶಾಖೆ ಗಳ ನವೀಕರಣದೊಂದಿಗೆ ಕಂಪ್ಯೂಟರೀಕೃತ ಶಾಖೆಗಳನ್ನಾಗಿಸಿ ಡಿಜಿಟಲೀಕೃತ ವ್ಯವಹಾರಗಳಿಗೆ ಒತ್ತು ನೀಡಲಾಗುತ್ತದೆ. ಹೆಜಮಾಡಿ ಯಲ್ಲೇ 1 ಕೋಟಿ ವೆಚ್ಚದಲ್ಲಿ ಗೋಡೌನ್ ನಿರ್ಮಿಸಲಾಗುವುದು.
ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಧುನೀಕೃತ ಶವಾಗಾರಕ್ಕೆ 7.75 ಲಕ್ಷ ರೂ. ವೆಚ್ಚದಲ್ಲಿ 2 ಮೃತದೇಹಗಳನ್ನು ಇರಿಸಬಹುದಾದ ಶೀತಲೀಕರಣ ಯಂತ್ರವನ್ನು ಸಂಘ ನೀಡಲಿದೆ. ಪಡುಬಿದ್ರಿ ಸುತ್ತಮುತ್ತಲ ಸಾರ್ವಜನಿಕರ ಅನುಕೂಲಕ್ಕಾಗಿ ಮೃತ ದೇಹವನ್ನು ಕಾಪಿಡಲು ಶೀತಲೀಕೃತ ಯಂತ್ರವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಸಂಘದ ವ್ಯವಹಾರ ಹೆಚ್ಚಿದಾಗ ಗ್ರಾಹಕರ ಸಾಲ ವಸೂಲಿಗೂ, ಶಾಖೆಗಳನ್ನು ಸಂದರ್ಶಿಸಲು ಉಪಯೋಗವಾಗುವಂತೆ 15 ಲಕ್ಷ ರೂ. ವೆಚ್ಚದ ವಾಹನ ಖರೀದಿಸಲಾಗಿದೆ. ಉಡುಪಿ ಜಿಲ್ಲೆಯ ಸಹಕಾರಿ ಯೂನಿಯನ್ ಕಟ್ಟಡಕ್ಕೆ 10 ಲಕ್ಷ ರೂ. ದೇಣಿಗೆ ಸಹಕಾರಿ ಸಂಘದ ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕರಾದ ರಸೂಲ್ ವೈ ಜಿ, ಗಿರೀಶ್ ಪಲಿಮಾರ್, ಶಿವರಾಮ ಎನ್ ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ ಬಿ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಸ್ಟೇನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕುಸುಮ ಎಂ. ಕರ್ಕೇರ, ಕಾಂಚನ, ಬಾಲಕೃಷ್ಣ ರಾವ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ವರದಿ ಮಂಡಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.
