ಪಡುಬಿದ್ರಿ : ತೆಂಗಿನ ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಾವಣೆ ಕಾರ್ಯಕ್ರಮ
ಪಡುಬಿದ್ರಿ : ಸಂಘಟನೆಯ ಕೊರತೆ ಮತ್ತು ವಿಚಾರಗಳ ಕೊರತೆಯಿಂದ ಕಾರ್ಮಿಕರು ಅಸಂಘಟಿತರಾಗುತ್ತಿದ್ದಾರೆ. ತೆಂಗಿನ ಮರ ಹತ್ತುವವರಿಗೆ ಇದೇ ಸಮಸ್ಯೆಯಾಗಿತ್ತು. ಇದನ್ನು ಗುರುತಿಸಿ ಅವರಿಗೆ ಉಪಯೋಗವಾಗುವ ಕಾರ್ಯವನ್ನು ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿರವರು ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೇರಾ ಸುರಕ್ಷಾ
ವಿಮೆ ಪ್ರಚಲಿತದಲ್ಲಿದೆ. ತಿಂಗಳಿಗೆ ಕೆಲವೊಂದು ತೆಂಗಿನ ಮರ ಹತ್ತುವವರ ಸಾವು ನಾವು ಕಾಣುತ್ತಿದ್ದೇವೆ. ಈ ವಿಮೆ ಅವರ ಕುಟುಂಬವರ್ಗಕ್ಕೆ ಸಹಾಯಕವಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ. ಕೇವಲ 99ರೂಪಾಯಿ ನೀಡಿ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ಶಾಶ್ವತ ಅಂಗ ಊನ ಅಥವಾ ಮೂಳೆ ಮುರಿತವಾದವರಿಗೆ ಎರಡುವರೆ ಲಕ್ಷ ಸಿಗುತ್ತದೆ. ಓರಿಯಂಟಲ್ ಬ್ಯಾಂಕ್ ವಿಮೆ ಮತ್ತು ಕೇಂದ್ರ ಸರಕಾರದ ಮೂಲಕ ದೊರೆಯಲಿದೆ. ಸಣ್ಣಪುಟ್ಟ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಕೊಡುವ ಅವಕಾಶವಿದೆ. ಅವರನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡುವವರಿಗೆ ದಿನಕ್ಕೆ 3 ಸಾವಿರದಂತೆ ಒಂದು ವಾರದವರೆಗೆ 18 ಸಾವಿರ ಖರ್ಚು ವೆಚ್ಚ ಭರಿಸುವ ಅವಕಾಶವಾಗಿದೆ. ನೋಂದಾವಣೆಗೆ ಅಕ್ಟೋಬರ್ 31 ಕೊನೆಯ ದಿನವಾಗಿದ್ದು ಆದಷ್ಟು ಬೇಗ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಉಡುಪಿ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹೇಮಂತ್ ಕುಮಾರ್ ತಿಳಿಸಿದರು.
ಅವರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪಡುಬಿದ್ರಿ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 19ರಂದು ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೇಡ್ ಬಿಲ್ಡಿಂಗ್ ನಲ್ಲಿ ಜರಗಿದ ಪಡುಬಿದ್ರಿ, ಫಲಿಮಾರು, ಹಾಗೂ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೆಂಗಿನ ಮರ ಹತ್ತುವವರಿಗೆ ಕೇರ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಾವಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ಉಡುಪಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಕಾಪುವಿನ ಸಹಾಯಕ ತೋಟಗಾರಿಕೆ ಅಧಿಕಾರಿ ಅಮಿತ ಸಿಂಪಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪಡುಬಿದ್ರಿ ಇದರ ಅಧ್ಯಕ್ಷರಾದ ಪಿ ಕೆ ಸದಾನಂದ ವಹಿಸಿದ್ದರು.
ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.
