ಪಿಎಫ್ಐ ಮತ್ತದರ ಸಹ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧ ಹೇರಿರುವುದು ಸ್ವಾಗತಾರ್ಹ ನಿರ್ಧಾರ : ಲಾಲಾಜಿ ಆರ್ ಮೆಂಡನ್
ಕಾಪು : ದೇಶದ ತುಂಬಾ ಮತೀಯ ಉಗ್ರವಾದ, ಗಲಭೆ ಸೃಷ್ಟಿ, ಕೋಮು ದ್ವೇಷ ಸೃಷ್ಟಿ, ದೇಶ ವಿರೋಧಿ ಕೃತ್ಯಗಳಲ್ಲಿ ಪಿಎಫ್ಐ ಮತ್ತು ಅದರ 8 ಸಹೋದರ ಸಂಸ್ಥೆಗಳು ಭಾಗಿಯಾಗಿದ್ದವು. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ನಡೆದ ಹಲವು ವಿದ್ವಂಸಕ ಕೃತ್ಯಗಳಲ್ಲಿ ಈ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಇದರ ಜೊತೆಗೆ ನಮ್ಮ ಹಲವಾರು ಕಾರ್ಯಕರ್ತರ ಕೊಲೆಗಳಲ್ಲಿ ಈ ಸಂಘಟನೆಯ ಪಾಲುದರಿಕೆ ಸ್ಪಷ್ಟವಾಗಿತ್ತು. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಕೂಗು ಕೇಳಿಬರುತ್ತಿತ್ತು. ಆದರೆ, ಈ ಹಿಂದೆ ಇದ್ದ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಸಂಘಟನೆಗಳನ್ನು ಪೋಷಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿತ್ತು.
ಆದರೆ, ಕಳೆದ ಎರಡು ವಾರಗಳಿಂದ ಪಿಎಫ್ಐ ಮತ್ತು ಸಹ ಸಂಘಟನೆಗಳ ಮೇಲೆ ಸರಿಯಾದ ಸಾಕ್ಷಿಗಳನ್ನು ಕಲೆಹಾಕಿ ಎನ್ಐಎ ಮತ್ತು ಉಳಿದ ತನಿಖಾ ಸಂಸ್ಥೆಗಳು ಸರಣಿ ಬಂಧನಗಳನ್ನು ಮಾಡಿತ್ತು. ಇದರ ನಂತರ ಕೆಲವು ಆತಂಕಕಾರಿ ಮಾಹಿತಿಗಳು ಸರ್ಕಾರಕ್ಕೆ ದೊರೆತ ಕಾರಣ ಮತ್ತು ಹಲವಾರು ಹೊರಗಿನ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಬೀತಾದ ಕಾರಣಕ್ಕೆ ಪಿಎಫ್ಐ ಮತ್ತು 8 ಇತರ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧವನ್ನು ಸರ್ಕಾರ ಹೇರಿದೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದ್ದು ಇದರಿಂದ ಈ ಸಂಘಟನೆಗಳ ಕುಕೃತ್ಯಗಳಿಗೆ ಕಡಿವಾಣ ಬೀಳಲಿದೆ ಜೊತೆಗೆ ಈ ಸಂಘಟನೆಗಳು ಈವರೆಗೆ ನಡೆಸಿರುವ ದುಶ್ಕೃತ್ಯಗಳ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ.
ಇದೇ ಸಂಧರ್ಭ ಈ ಕಾರ್ಯಾಚರಣೆಗೆ ಕಾರಣರಾದ ನವರಾತ್ರಿಯ ಶುಭಸಂದರ್ಭದಲ್ಲಿ ಇಂತಹ ದಿಟ್ಟ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ, ಗೃಹ ಸಚಿವರಾದ ಅಮಿತ್ ಶಾ, ಕೇಂದ್ರ ಗೃಹ ಇಲಾಖೆ, ಎನ್ಐಎ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
