ಉಚ್ಚಿಲ : ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ ; 700ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
Thumbnail
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಳದ ಮೊಗವೀರ ಭವನ ಸಭಾಂಗಣದಲ್ಲಿ ಶನಿವಾರ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಉಚ್ಚಿಲ ದಸರಾ ಅಂಗವಾಗಿ ಹಮ್ಮಿಕೊಂಡ ಅವಿಭಜಿತ ದಕ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೆದ್ದಾರಿ ಪಕ್ಕದಲ್ಲಿದ್ದುಕೊಂಡು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರವು ದೇಶ ವಿದೇಶಗಳ ಭಕ್ತರನ್ನು ಅಕರ್ಷಿಸುವ ತಾಣವಾಗಿ ಮೂಡಿಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಬಾರಿಯ ದಸರಾ ಮಹೋತ್ಸವ ಅದರ ಹಿರಿಮೆಗೆ ಗರಿ ಮೂಡಿಸಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲಾ ದಸರಾ ಮಹೊತ್ಸವಗಳನ್ನು ಉಚ್ಚಿಲ ದಸರಾ ಮೀರಿಸಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಸನ್ಮಾನ : ದ್ವಿತೀಯ ಬಾರಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರಕುಮಾರ್‌, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ ಮತ್ತು ಝೀ ಕನ್ನಡದ ಡ್ರಾಮಾ ಜ್ಯೂನಿಯರ್ ವಿಭಾಗದ 4ನೇ ಅವೃತ್ತಿಯಲ್ಲಿ ವಿಜೇತರಾದ ಸಮೃದ್ಧಿ ಕುಂದಾಪುರರವರನ್ನು ಮಹಾಲಕ್ಷ್ಮಿ ಕೊ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ನಾಡೋಜ ಡಾ.ಜಿ.ಶಂಕರ್, ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ.ಸುವರ್ಣ, ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಮಟ್ಟಾರು ರತ್ನಾಕರ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಅಪ್ಪಿ ಎಸ್.ಸಾಲ್ಯಾನ್ ಉಪಸ್ಥಿತರಿದ್ದರು. ಯಶಪಾಲ್ ಎ.ಸುವರ್ಣ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ವಿಜೇತಾ ಶೆಟ್ಟಿ ನಿರೂಪಿಸಿದರು. ಬ್ಯಾಂಕ್‌ನ ಎಮ್‌ಡಿ ಜಗದೀಶ ಮೊಗವೀರ ವಂದಿಸಿದರು. ಚಿತ್ರಕಲಾ ಸ್ಪರ್ಧೆಯ 5 ವಿಭಾಗಗಳಲ್ಲಿ 7೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.
Additional image
01 Oct 2022, 05:13 PM
Category: Kaup
Tags: