ಸಮಾನ ಮನಸ್ಕರ ತಂಡದಿಂದ ಉಚ್ಚಿಲದ ಅಶಕ್ತ ಕುಟುಂಬಕ್ಕೆ ನೂತನ ಗೃಹ ಹಸ್ತಾಂತರ
ಉಚ್ಚಿಲ : ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್ ನೇತೃತ್ವದ ಸಮಾನ ಮನಸ್ಕರ ತಂಡದ ೧೩ನೇ ಯೋಜನೆಯಡಿ ಬಡ-ಅಶಕ್ತರಾದ ಉಚ್ಚಿಲ ಪೊಲ್ಯದ ಪ್ರೇಮಾ ಆಚಾರ್ಯ ಮತ್ತು ಪುತ್ರಿ ಪ್ರೀತಿಕಾ ಅವರ ವಾಸ್ತವ್ಯಕ್ಕೆ ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹವನ್ನು ರವಿವಾರ ಸಂಜೆ ಹಸ್ತಾಂತರಿಸಲಾಯಿತು.
ಗಣ್ಯರ ಸಮ್ಮುಖದಲ್ಲಿ ಮನೆಯನ್ನು ಹಸ್ತಾಂತರಿಸಿ ಶುಭ ಸಂದೇಶ ನೀಡಿದ ಕಟಪಾಡಿ ಶಶಿಧರ್ ಪುರೋಹಿತ್ ಅವರು, ಸಮಾನ ಮನಸ್ಕರ ತಂಡದ ಮೂಲಕ ಸಮಾಜದ ಸುಪ್ತವಾಗಿರುವ ಶ್ರೇಷ್ಠ ವ್ಯಕ್ತಿತ್ವವು ಅನಾವರಣಗೊಳ್ಳುತ್ತಿದೆ. ಗೃಹ ನಿರ್ಮಾಣ ಮತ್ತು ನವೀಕರಣ ಸಮಿತಿಯ ೪೯ ಜನರ ತಂಡದಿಂದ ಈ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ತಂಡದ ಸಮಸ್ತರ ತ್ಯಾಗ, ಪರಿಶ್ರಮವನ್ನು ಶ್ಲಾಘಿಸಿದರು.
ಸ್ಥಳೀಯ ಪ್ರಮುಖರಾದ ಶಾಂತಮೂರ್ತಿ ಭಟ್ ಉಚ್ಚಿಲ, ಸಮಾನ ಮನಸ್ಕರ ತಂಡದ ಶಿಲ್ಪಿ ಮಾಧವ ಆಚಾರ್ಯ ಪುತ್ತೂರು, ಪಡು ಕುತ್ಯಾರು ಸದಾಶಿವ ಎ. ಆಚಾರ್ಯ, ಡಾ| ಪ್ರತಿಮಾ ಜೆ. ಆಚಾರ್ಯ ಮಣಿಪಾಲ, ನಿವೃತ್ತ ಯೋಧ ವಾದಿರಾಜ ಆಚಾರ್ಯ ಅಲೆವೂರು, ಕಾಂತಿ ಸುಬ್ರಹ್ಮಣ್ಯ ಆಚಾರ್ಯ ವೇದಿಕೆಯಲ್ಲಿದ್ದರು.
ಈ ಸಂದರ್ಭ ಸಮಾನ ಮನಸ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು.
ಬಿಳಿಯಾರು ರಾಜೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಯಜ್ನನಾಥ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ವಿಠ್ಠಲ ಆಚಾರ್ಯ ಪಣಿಯೂರು ವಂದಿಸಿದರು.
