ನಾಡದೋಣಿಗಳಿಗೆ ಸೀಮೆ ಎಣ್ಣೆ ಪೂರೈಸಲು ಕಾಪುವಿನಲ್ಲಿ ಶಾಸಕರಿಗೆ ಮನವಿ
Thumbnail
ಕಾಪು : ಕಳೆದ 2 ತಿಂಗಳಿಂದ ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ತಕ್ಷಣ ಸೀಮೆ ಎಣ್ಣೆ ಪೂರೈಸುವಂತೆ ಗುರುವಾರ ಹೆಜಮಾಡಿ ಪಟ್ಟೆಬಲೆ ಮತ್ತು ಕಂತಬಲೆ ಯೂನಿಯನ್ ಸದಸ್ಯರು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‌ರವರಿಗೆ ಕಾಪುವಿನಲ್ಲಿ ಮನವಿ ಸಲ್ಲಿಸಿದ್ದಾರೆ. ವರ್ಷಂಪ್ರತಿ ಮಳೆಗಾಲ ಮುಗಿದ ಬಳಿಕ ನಾಡದೋಣಿಗಳಿಗೆ ಸಬ್ಸಿಡಿಯುಕ್ತ ಸೀಮೆಎಣ್ಣೆ ನೀಡಲಾಗುತ್ತಿತ್ತು. ಮಳೆಗಾಲದ ಬಳಿಕ 2 ತಿಂಗಳು ನಾಡದೋಣಿ ಮೀನುಗಾರರಿಗೆ ಹೆಚ್ಚು ಸಂಪಾದನೆಯ ಸಮಯ. ಅತೀ ಹೆಚ್ಚು ಮತ್ಸ್ಯ ಸಂಪತ್ತು ಇದೇ ಸಮಯದಲ್ಲಿ ದೊರೆಯುತ್ತದೆ. ಆದರೆ ಸೀಮೆಎಣ್ಣೆ ದೊರೆಯದೆ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ಮೀನುಗಾರರು ತಲುಪಿದ್ದಾರೆ. ಇದರಿಂದ ಬಡ ಕುಟುಂಬಗಳು ಕಂಗಾಲಾಗಿದ್ದಾರೆ. ಹಾಗಾಗಿ ತಕ್ಷಣ ಮಧ್ಯ ಪ್ರವೇಶಿಸಿ ಸೀಮೆಎಣ್ಣೆ ಪೂರೈಸುವಂತೆ ಮೀನುಗಾರರು ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಮನವಿ ಸ್ವೀಕರಿಸಿದ ಶಾಸಕ ಮೆಂಡನ್, ಸರಕಾರದ ಮೇಲೆ ಒತ್ತಡ ತಂದು ಶೀಘ್ರ ಸೀಮೆಎಣ್ಣೆ ಪೂರೈಕೆಗೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಯೂನಿಯನ್ ಅಧ್ಯಕ್ಷ ಏಕನಾಥ ಕರ್ಕೇರ, ಉಪಾಧ್ಯಕ್ಷ ಮುಕುಂದ ಕುಂದರ್, ಪ್ರಧಾನ ಕಾರ್ಯದರ್ಶಿ ಗೋವರ್ಧನ ಕೋಟ್ಯಾನ್, ಕೋಶಾಧಿಕಾರಿ ದಿನೇಶ್ ಸುವರ್ಣ, ಸದಸ್ಯ ನಿಖಿಲ್ ಕುಂದರ್ ಉಪಸ್ಥಿತರಿದ್ದರು.
20 Oct 2022, 08:45 PM
Category: Kaup
Tags: