ಪೆರ್ಣಂಕಿಲ ದೇವಳ ಜೀರ್ಣೋದ್ಧಾರ ಕಚೇರಿ ಉದ್ಘಾಟನೆ, ವಿಜ್ಞಾಪನಾ ಪತ್ರ ಬಿಡುಗಡೆ
Thumbnail
ಉಡುಪಿ : ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಳದ ಜೀರ್ಣೊದ್ಧಾರ ಅಂಗವಾಗಿ 10ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದು ಜೀರ್ಣೋದ್ಧಾರ ಕಚೇರಿ ಉದ್ಘಾಟನೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ಜೀರ್ಣೋದ್ಧಾರ ಪೂರ್ವಭಾವಿ ಸಭೆಯು ಸೋಮವಾರ ನಡೆಯಿತು. ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ವಿಶ್ವಸ್ತ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜೀರ್ಣೋದ್ಧಾರ ಕಚೇರಿ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ, ಬರಿಗೈಯಲ್ಲಿ ಬಂದ ನಾವು ಭಗವಂತ ಕೊಟ್ಟದ್ದನ್ನು ಮರಳಿ ಸಮರ್ಪಿಸುವುದರಲ್ಲಿ ಬದುಕಿನ ಸಾರ್ಥಕ್ಯವಿದೆ. ದೇವರು ಕೊಟ್ಟ ಭತ್ತವನ್ನು ದೇವರು ಕೊಟ್ಟ ಭೂಮಿಯಲ್ಲಿ ಬಿತ್ತಿ, ದೇವರು ಕೊಟ್ಟ ನೀರೆರೆದು ಭತ್ತ ಉತ್ಪಾದಿಸಿ ದೇವರಿಗೆ ಸಮರ್ಪಿಸುವುದರ ಹಿಂದೆ ದೇವರ ಅನುಗ್ರಹ ಸ್ಮರಣೆ ಮುಖ್ಯ. ನಮ್ಮದಲ್ಲದ್ದು ನಮ್ಮದಾಗದು, ಎಲ್ಲವೂ ಭಗವಂತನಿಗೆ ಸೇರಿದ್ದು , ತನ್ನದಲ್ಲದ ಸೊತ್ತು ಉಣ್ಣುವವ ಹೇಗೆ ಕಳ್ಳ, ದರೋಡೆಕೋರ ಎನಿಸಿಕೊಳ್ಳುತ್ತಾನೋ ಹಾಗೆಯೇ ದೇವರ ಸೊತ್ತಿಗೆ ಕೈ ಹಾಕಿದರೆ ನಾವು ಕಳ್ಳರಾಗುತ್ತೇವೆ. ದೇವರು ಕೊಟ್ಟದ್ದನ್ನು ನಾವು ಅನುಭವಿಸುತ್ತೇವೆ ಎನ್ನುವ ಅರ್ಪಣೆ, ಕೃತಜ್ಞತಾ ಮನೋಭಾವ ನಮಗಿದ್ದರೆ ಅದು ದೇವರ ಪೂಜೆಯಾಗಬಲ್ಲದು ಎಂದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕೊಡಿಬೆಟ್ಟು ಗ್ರಾಮಕ್ಕೆ 23ಕೋಟಿ ರೂ., ಪೆರ್ಣಂಕಿಲ ವ್ಯಾಪ್ತಿಗೆ 8ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಪ್ರಗತಿಯಲ್ಲಿದ್ದು ಪೆರ್ಣಂಕಿಲ ದೇವಳ ಪರಿಸರದ ರಸ್ತೆಗೆ 35ಲಕ್ಷ ರೂ. ಸಹಿತ ವಿವಿಧ ಯೋಜನೆಗಳ ಪ್ರಸ್ತಾವನೆಗೆ ಅನುಗುಣವಾಗಿ ನೆರವಿನ ಭರವಸೆ ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಮಾತನಾಡಿ, ದೇವಳದ ಜೀರ್ಣೋದ್ಧಾರ ಕಾರ್ಯವು ಭಕ್ತರು ಭಕ್ತಿಯಿಂದ ತಮ್ಮ ಕೊಡುಗೆ ನೀಡಲು ಸಕಾಲ ಎಂದರು. ತಮ್ಮ ತಾಯಿಯ ಹೆಸರಲ್ಲಿ ದೇವಳಕ್ಕೆ ಐದು ಲಕ್ಷ ರೂ. ದೇಣಿಗೆ ಘೋಷಿಸಿದರು. ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಮಾತನಾಡಿ, ಊರ ದೇವಳದ ಜೀರ್ಣೋದ್ಧಾರವಾದರೆ ಮನೆ, ವ್ಯಕ್ತಿಯ ಜೀರ್ಣೋದ್ಧಾರವಾದಂತೆ. ನಿಮ್ಮೊಳಗಿನ ಭಕ್ತಿ, ಶಕ್ತಿಯ ನೆರವಿನಿಂದ ಊರ ಸಮಸ್ಯೆಗಳು ಪರಿಹಾರವಾಗಲಿ, ಏಕ ಮನಸ್ಸಿನ ಸಹಕಾರದಿಂದ ದೇವಳ ಜೀರ್ಣೋದ್ಧಾರವಾಗಲಿ ಎಂದು ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ಪ್ರಾಸ್ತಾವಿಕ ಮಾತನಾಡಿ, ಮೂರ್ನಾಲ್ಕು ದಶಕಗಳಿಂದ ದೇವಳದ ಜೀರ್ಣೋದ್ಧಾರ ಕನಸಾಗಿದ್ದು ಪೇಜಾವರ ಮಠದಿಂದ ನೀಡಿದ 1.5ಕೋಟಿ ರೂ. ಠೇವಣಿಯಾಗಿಟ್ಟು ಭಕ್ತರಿಂದ ಸ್ವಯಂಪ್ರೇರಿತ ದೇಣಿಗೆ ನಿರೀಕ್ಷಿಸಲಾಗಿದೆ. ದೇವಳದ ಪಂಚಾಂಗ ನಿರ್ಮಾಣಕ್ಕೆ 9ಗ್ರಾಮಗಳ ಭಕ್ತರ ಕರಸೇವೆಗೆ ಉದ್ದೇಶಿಸಲಾಗಿದೆ ಎಂದರು. ಪೇಜಾವರ ಮಠದ ದಿವಾನ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಭಕ್ತರ ಪರವಾಗಿ ಕುದಿ ವಸಂತ ಶೆಟ್ಟಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಸದಾನಂದ ಪ್ರಭು ಸ್ವಾಗತಿಸಿದರು. ಹರೀಶ್ ಸರಳಾಯ ನಿರೂಪಿಸಿದರು. ಉಮೇಶ್ ನಾಯಕ್ ವಂದಿಸಿದರು.
Additional image Additional image
15 Nov 2022, 02:22 PM
Category: Kaup
Tags: