ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು : ಡಾ. ನಿಕೇತನ

Posted On: 18-05-2025 03:35PM

ಉಡುಪಿ : ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆಯಾಗಿದೆ. ನಮ್ಮ ಸಾಹಿತ್ಯ ವಿವಿಧ ಮಜಲುಗಳನ್ನು ಸ್ಪರ್ಶಿಸಿ ವಿವಿಧ ರಂಗಕ್ಕೆ ಕಾಲಿಟ್ಟರೂ ಕೂಡ ಅದರ ಮೌಲ್ಯವನ್ನು ಕಳೆದುಕೊಳ್ಳದೆ ಇನ್ನಷ್ಟು ಎತ್ತರಕ್ಕೆ ಏರಿದೆ ಎಂದು ಪ್ರಾಧ್ಯಾಪಕಿ, ಸಾಹಿತಿ ಡಾ. ನಿಕೇತನ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ನಡೆದ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ಕಲಾಯತನ ಸಾಹಿತ್ಯ ಯಕ್ಷ ಸಂಭ್ರಮ' ದಲ್ಲಿ ಸಮಾರೋಪ ಭಾಷಣ ಮಾಡಿದರು. ಸಾಮಗರವರ ದೈತ್ಯ ಪ್ರತಿಭೆ ಅವರ ಮಾನವೀಯತೆಯ ನಡೆ ಅಭಿನಂದನಾಹ೯ ಕನ್ನಡ ಮತ್ತು ಆಂಗ್ಲ ಭಾಷೆಯ ಅವರ ಪ್ರೌಢಿಮೆ ಅವರು ನಾಡಿಗೆ ಕೊಟ್ಟಂತ ಶ್ರೇಷ್ಠ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿದೆ. ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು. ಈ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಚರ್ಚೆಗಳು ವಿಚಾರಗೋಷ್ಠಿ ಯಕ್ಷ ಕವಿಗೋಷ್ಠಿ ಸೇರಿದಂತೆ ಬಹಳಷ್ಟು ಉತ್ತಮವಾದ ಕಾರ್ಯಕ್ರಮಗಳು ನಡೆದಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಮಾತನಾಡಿ, ಮಲ್ಪೆ ಎಂದರೆ ಎಲ್ಲರಿಗೂ ನೆನಪಾಗುವುದು ಶಂಕರನಾರಾಯಣ ಸಾಮಗ ಅಂತ ಶ್ರೇಷ್ಠ ವ್ಯಕ್ತಿ ಅವರು ಕೊಟ್ಟಂತಹ ಕೊಡುಗೆಗಳು ನಮ್ಮನ್ನು ಈ ಎತ್ತರಕ್ಕೆ ಏರಿಸುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನದ ಕಲಾವಿದರನ್ನು ಸಮ್ಮೇಳನ ಅಧ್ಯಕ್ಷ ಮಾಡಿರೋದು ಯಕ್ಷಗಾನಕ್ಕೆ ನೀಡಿದ ದೊಡ್ಡ ಅಭಿನಂದನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಮನೆ ಮಾತಾಗಿದೆ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಬೇಕು ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ವೆಂಕಟ್ರಮಣ ಐತಾಳ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣಿೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್, ಕಾರ್ಯದರ್ಶಿ ಸತೀಶ್ ಕೊಡವೂರು, ತಾಲೂಕು ಪದಾಧಿಕಾರಿಗಳಾದ ಜನಾರ್ಧನ ಕೊಡವೂರು, ರಾಜೇಶ್ ಭಟ್ ಪಣಿಯಾಡಿ, ರಂಜಿನಿ ವಸಂತ್ ಮುಂತಾದವರು ಉಪಸ್ಥಿತರಿದ್ದರು.

ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಮ್ಮೇಳನದ ಅಧ್ಯಕ್ಷ ದಂಪತಿಗಳಿಗೆ ಗೌರವಿಸಲಾಯಿತು. ಪ್ರಭಾಕರ್ ತುಮರಿ ಮತ್ತು ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು ರಂಜನಿ ವಸಂತ್ ವಂದಿಸಿದರು. ನಂತರ ಯಕ್ಷ ರಂಗಾಯಣ ಇವರಿಂದ ಕುಮಾರವ್ಯಾಸ ಭಾರತ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ಕಾರ್ಯಕ್ರಮ ನಡೆಯಿತು.