ಅರ್ಬುದ
Posted On:
18-05-2025 03:43PM
ಯಾರು ಬಲ್ಲರು ನಿನ್ನ ಮಾಯಕಾರತನವ ???
ಸುದ್ಧಿಯಿಲ್ಲದೆ ಸ್ವಯಂಭು ಮೂರ್ತಿವೆತ್ತು ಬಲಿತು
ಮದ್ದಿಗೂ ಬಗ್ಗದೆ ಬುದ್ಧಿಗೆ ಒಗ್ಗದೆ ಸಿದ್ಧಿಗೂ ಸಿಗದೆ
ತಂದೊಡ್ಡುವೆ ಬದುಕಿಗೂ ಸಾವಿಗೂ ನರಕ ಯಾತನೆ
ಬಂದೊದಗುವೆ ಬಾಳಿಗೆ ನಿತ್ಯ ಕಂಠಕನಾಗಿ
ಬಡವನೋ ಬಲ್ಲಿದನೋ ಬಾಲ್ಯ ಯೌವ್ವನ
ವೃದ್ಧಾಪ್ಯ ನಿನಗಿಲ್ಲ ಬೇಧ ಅರ್ಬುದರಾಯ
ಕಡು ಸಮಾನತೆಯ ಜೀವ ಭಕ್ಷಕ ಹರಿಕಾರ
ಮಡುವಿಕೊಳ್ಳುತಿ ದಶಪಾದಗಳಲಿ ಏಡಿರಾಯ
ನಿನ್ನ ಆಗಮ ಉಗಮ ಜಂಗಮತನ
ಮೌನದ ಮುಸುಕಿನಲಿ ಮತ್ತೆ ಮತ್ತೆ ಉಲ್ಬಣ
ಎಣಿಸಲಾರದ ಪರಮ ಸೋಜಿಗವದು
ಬಣ್ಣಿಸಲಾರದ ನಿನ್ನ ಪರಮ ನೀಚತನವದು
ರಸಹೀರಿ ಕಸವಾಗಿಸಿ ಬಸವಳಿಸಿ
ಕಸುವ ಬಳಲಿಸಿ ಬರಿದಾಗಿಸಿ
ಅಸುವ ಅಪರಿಸುವ ಓ! ಅರ್ಬುದ
ಅಸುರ ತನದ ನಿನ್ನ ನಡೆ ಅದಕ್ಕಿಂತ ಕಡೆ
ಶ್ವೇತ ರಕುತ ಕಣಗಳು ಮರಣಿಸದಿರಲು ನಿನ್ನ ಜನನ
ನಿತ್ಯ ಬಲಗೊಳ್ಳುತ ಅಂಗದಿಂದ ಅಂಗಕೆ ಪಯಣ
ಮರ್ತ್ಯರ ಜೀವ ಜೀವನದಲಿ ಅತಿಕ್ರಮಣ
ಸತ್ವವ ಕಸಿದು ಚೈತನ್ಯ ಬಸಿದು ಕಬಳಿಸುತಿ ನೀ ಪ್ರಾಣ
ಶಿರಡಿ ಸಾಯಿನಾಥರ ಗುರು ಪರಮಹಂಸರ
ಪರಮ ಯೋಗಿ ರಮಣರ ವಿಶ್ವಕವಿ ರವೀಂದ್ರರ
ವರಕವಿ ಬೇಂದ್ರೆಯವರ ಮೇಹರಬಾಯಿ ಟಾಟಾರವರ
ಹರಣ ಕಸಿದ ನಿನಗೆ ಸಾಮಾನ್ಯರೇನು ಮಹತ್ತರ ??
ಕರಾಳ ಕಂಬಂಧ ಬಾಹುಗಳ ಚಾಚಿ
ನಿರಂತರ ಹಸಿ ರಕುತವ ಬಸಿವ ಪಿಶಾಚಿ
ಕರುಣೆಯಿರಲಿ ಕಡು ಬಡವರ ಮೇಲೆ
ಸೈರಣೆಯಿಂದಲಿ ತಗ್ಗಿಸು ನಿನ್ನ ಲೀಲೆ
ಯಾರು ಬಲ್ಲರು ನಿನ್ನ ಮಾಯಕಾರ ತನವ ???
ಉದಯ ಬಿ. ಶೆಟ್ಟಿ, ಪಂಜಿಮಾರು