ಮೇ.29 - 30 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ - ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ; ನಿಧಿಕುಂಭ ಸ್ಥಾಪನೆ
Thumbnail
ಪಡುಬಿದ್ರಿ : ಸುಮಾರು 30 ಕೋಟಿ ವೆಚ್ಚದಲ್ಲಿ ಶಾಸ್ತ್ರೀಯ ನೆಲೆಗಟ್ಟಿನಲ್ಲಿ, ಶಿಲ್ಪ ವಿನ್ಯಾಸಗಳೊಂದಿಗೆ ಪರಿಷ್ಕೃತಗೊಳಿಸಿ ಪುನರಚಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ಸಂಕಲ್ಪಿಸಲಾಗಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಮೇ.29 ರಂದು ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ಹಾಗೂ ಮೇ.30ರಂದು ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ನಿಧಿಕುಂಭ ಸ್ಥಾಪನೆಯು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಸೋಮವಾರ ಪಡುಬಿದ್ರಿಯಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಕಳ - ಹೆಬ್ರಿ ಪರಿಸರದಲ್ಲಿ ಶ್ರೀ ದೇಗುಲದ ಧ್ವಜಸ್ತಂಭಕ್ಕಾಗಿ ದಾನಿಗಳ ಸಹಕಾರದಿಂದ ಈಗಾಗಲೇ ಸುಮಾರು 65 ಅಡಿ ಎತ್ತರದ ಬೋಗಿಯ ಮರವೊಂದನ್ನು ಆರಿಸಲಾಗಿದೆ. ಮೇ. 29ರಂದು ಅಜೆಕಾರು, ಕಾರ್ಕಳ, ಜೋಡುರಸ್ತೆ, ಬೆಳ್ಮಣ್ ಮಾರ್ಗವಾಗಿ ಈ ನೂತನ ಧ್ವಜಸ್ತಂಭದ ಮರವು ಆಗಮಿಸಲಿದ್ದು ಭಕ್ತರು ಇದು ಸಾಗಿ ಬರುವ ಹಾದಿಯಲ್ಲಿ ಅಲ್ಲಲ್ಲಿ ಸ್ವಾಗತಿಸಿ ಬೀಳ್ಕೊಡಲಿರುವರು. ಅಂದು ಸಂಜೆಯ ವೇಳೆಗೆ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಅದನ್ನು ಸ್ವಾಗತಿಸಿ ವೈಭವದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪಡುಬಿದ್ರಿಗೆ ತರಲಾಗುವುದು. ಮೇ 30ರಂದು ಶ್ರೀ ಕ್ಷೇತ್ರದಲ್ಲಿನ ಉಪಸ್ಥಾನ ಸಾನ್ನಿಧ್ಯ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಭಕ್ತರ ಭಕ್ತಿಯ ಸಂಕೇತವಾಗಿ ನಿಧಿ ಕುಂಭ ಸ್ಥಾಪನೆಯ ಕಾರ್ಯವು ಬೆಳಿಗ್ಗೆ ಗಂಟೆ 7:12ರ ಮುಹೂರ್ತದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯುವ ಆಗಮೋಕ್ತ ವಿಧಿ ವಿಧಾನಗಳ ಸಂದರ್ಭದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಲಿರುವರು. ಈ ನಿಧಿಕುಂಭದಲ್ಲಿ ಭಕ್ತರಿಗೆ ಶುದ್ಧ ಚಿನ್ನ, ಬೆಳ್ಳಿ, ನವರತ್ನಗಳನ್ನು ಅರ್ಪಿಸುವ ಸದವಕಾಶಗಳಿದ್ದು ವಾರದ ಮುಂಚಿತವಾಗಿಯೇ ಈ ಚಿನ್ನ, ಬೆಳ್ಳಿಯ ನಾಣ್ಯಗಳನ್ನು ಶ್ರೀ ದೇವಸ್ಥಾನದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಭಕ್ತರು ಮನೆಯಿಂದ ತರುವ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಶ್ರೀ ದೇಗುಲದ ಕಚೇರಿಗೆ ತೋರಿಸಿ ಅರ್ಪಿಸಬಹುದು. ಕಾರ್ಕಳದ ಗುತ್ತಿಗೆದಾರರಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖಾ ನಿಬಂಧನೆಗಳ ಅನುಸಾರವಾಗಿ ಲೋಕೋಪಯೋಗಿ ಇಲಾಖಾ ಅನುಮತಿ ಸಹಿತವಾಗಿ ಈಗಾಗಲೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿದ್ದು ಸಾಮಾನ್ಯ ನೆಲಮಟ್ಟದಲ್ಲಿಯವರೆಗೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರವೀಂದ್ರನಾಥ ಜಿ.ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ ನಡ್ಸಾಲು ಗುತ್ತು, ಶ್ರೀ ದೇವಳದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಗುರುರಾಜ್ ಭಟ್, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
19 May 2025, 12:51 PM
Category: Kaup
Tags: