ಕುತ್ಯಾರು : ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಕುತ್ಯಾರು ನವೀನ್ ಶೆಟ್ಟಿಗೆ ಅಭಿನಂದನೆ
ಶಿರ್ವ : ಶಿರ್ವ ಸಮೀಪದ ಕುತ್ಯಾರು ಗ್ರಾ,ಪಂ.ವ್ಯಾಪ್ತಿಯ 159ನೇ ಕುತ್ಯಾರು ಬೂತ್‌ನ ಸಾಮಾನ್ಯ ಕಾರ್ಯಕರ್ತರಾಗಿ ಹಂತಹಂತವಾಗಿ ಬೆಳೆದು ಗ್ರಾ.ಪಂ.ಅಧ್ಯಕ್ಷರಾಗಿ, ತಾಲೂಕು, ಕಾಪು ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಯಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಮೂರು ಅವಧಿಗೆ ಕರ್ತವ್ಯ ನಿರ್ವಹಿಸಿ ಇದೀಗ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿರುವ ಕುತ್ಯಾರು ನವೀನ್ ಶೆಟ್ಟಿರವರಿಗೆ ಕುತ್ಯಾರು ಬೂತ್ ಕಾರ್ಯಕರ್ತರು ಕುತ್ಯಾರು ಅಶೋಕ್ ಗೌಡ್ರು ನಿವಾಸ ಗಿರಿಜಾದಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಮತಗಟ್ಟೆಯ ಕಾರ್ಯಕರ್ತನಾಗಿ ವಿಶೇಷವಾಗಿ ಸೇವೆ ನೀಡಿದ ನವೀನ್ ರಾಜಕೀಯ ಬದುಕಿನ ಮುನ್ನುಡಿ ಬರೆದವರು. 1993 ರಿಂದಲೇ ಬೂತ್, ಗ್ರಾ.ಪಂ., ತಾ.ಪಂ., ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಈ ಭಾಗದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ದೇಶದಲ್ಲಿ ಮೋದಿಯವರ 11 ವರ್ಷಗಳ ಆಡಳಿತ ಮುಂದುವರಿಯುತ್ತಿದೆ. ಇದೊಂದು ಉತ್ತಮ ಅವಕಾಶ. ಸತ್ವ ಪರೀಕ್ಷೆಯ ಕಾಲ, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ನವೀನ್ ಶೆಟ್ಟಿ ಮಾತನಾಡಿ, ಜವಾಬ್ದಾರಿಗೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವುದೇ ಪ್ರಥಮ ಗುರಿ. "ಬೂತ್ ಗೆದ್ದರೆ ದೇಶ ಗೆದ್ದೀತು" ಇದು ಮೋದಿಯವರ ಮಾತು ನನಸಾಗಿಸುವುದೇ ನಮ್ಮ ಉದ್ದೇಶ. ಡಾ.ಆಚಾರ್ಯ, ಕೊಡ್ಗಿಯವರು ನಮ್ಮ ಮೊದಲ ಹಂತದ ನಾಯಕರು. ನಾವು ಎರಡನೇ ಹಂತದವರು, ಮೂರನೆ ಹಂತದ ನಾಯಕರನ್ನು ತಯಾರು ಮಾಡುವುದೇ ನಮ್ಮ ಗುರಿ. ಜಿಲ್ಲೆಯಾದ್ಯಂತ ಬೂತ್‌ಗೆ ಶಕ್ತಿ ಕೊಡುವ ಕಾರ್ಯ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಕುತ್ಯಾರು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಆಚಾರ್ಯ, ಜಿನೇಶ್ ಬಲ್ಲಾಳ್, ಪೂರ್ಣಚಂದ್ರ, ಸತೀಶ್ ಕುತ್ಯಾರು, ಬೂತ್ ಮಟ್ಟದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
ಬೂತ್ ಅಧ್ಯಕ್ಷ ಧೀರಜ್ ಕುಲಾಲ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು.
ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿ, ಗ್ರಾ.ಪಂ.ಸದಸ್ಯೆ ಲತಾ ಆಚಾರ್ಯ ವಂದಿಸಿದರು.
