ಬಂಟಕಲ್ಲು ಶಾಲಾ ಹಳೆವಿದ್ಯಾರ್ಥಿ ಶಿವಾನಂದ ಪಾಟ್ಕರ್‌ಗೆ ಸಹಪಾಠಿಗಳಿಂದ ಭಾವಪೂರ್ಣ ನುಡಿನಮನ
ಶಿರ್ವ : ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿ, ಶಾಲೆಯ ನಂಟನ್ನು ಬೆಳಸಿಕೊಂಡು, ಶಾಲಾ ಜೀವನದ ರಜತ ಸಂಭ್ರಮವನ್ನೂ ಅದೇ ಪ್ರಾಥಮಿಕ ಶಾಲೆಯಲ್ಲಿ ಆಚರಿಸಿಕೊಂಡು ವಿದ್ಯಾರ್ಥಿಗಳಿಗೆ, ಶಾಲೆಗೆ ಕೊಡುಗೆಗಳನ್ನು ನೀಡಿ ಕೃತಜ್ಞತಾ ಭಾವವನ್ನು ಬೆಳೆಸಲು ಪ್ರೇರಣಾಕರ್ತರಾದ ಉದ್ಯಮಿ, ಕೊಡುಗೈದಾನಿ ಬಂಟಕಲ್ಲು ಶಿವಾನಂದ ಪಾಟ್ಕರ್ ಮುಂಬಯಿಯಲ್ಲಿ ಇತ್ತೀಚೆಗೆ ತಮ್ಮ 50ರ ಹರೆಯದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸಹಪಾಠಿಗಳು ಸೋಮವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು.
ಅಂದು ಶಿಕ್ಷಕರಾಗಿದ್ದ ಲೀಲಾವತಿ, ಜಯಂತಿ, ಹಿಲ್ಡಾ, ಎನ್.ರಾಧಾಕೃಷ್ಣ ಪ್ರಭು, ಬಿ.ಪುಂಡಲೀಕ ಮರಾಠೆ ಮಾತನಾಡಿ ಹಳೆವಿದ್ಯಾರ್ಥಿ ಶಿವಾನಂದ ಪಾಟ್ಕರ್‌ರವರ ನೇತೃತ್ವದಲ್ಲಿ ಸಹಪಾಠಿ ಪ್ರಭಾಕರ ಜೋಗಿ ಹಿರಿತನದಲ್ಲಿ ಬ್ಯಾಚ್ಮೇಟುಗಳು ಸಂಘಟಿತರಾಗಿ ಶಾಲೆಗೆ ಬೇಕಾದ ಕೊಡುಗೆಗಳನ್ನು ನೀಡುವುದರ ಜೊತೆಗೆ ಶಾಲೆ ಹಾಗೂ ಶಿಕ್ಷಕರೊಂದಿಗೆ ಬೆಸೆದು ಕೊಂಡಿರುವ ಅವಿನಾಭಾವ ಸಂಬಂಧ ಎಲ್ಲೂ ಕಾಣಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಶಾಲೆಗೆ ಹಳೆವಿದ್ಯಾರ್ಥಿಗಳೇ ಆಪದ್ಭಾಂದವರು. ಶಾಲಾ ಶತಮಾನೋತ್ಸವದ ಹೊಸ್ತಿಲಲ್ಲಿಯೇ ಒಬ್ಬ ನಿಷ್ಠಾವಂತ ಹಳೆವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಇದು ಶಾಲೆಗೂ ಸಮಾಜಕ್ಕೂ ತುಂಬಲಾರದ ನಷ್ಟ. ಅವರ ಬ್ಯಾಚ್‌ಮೇಟ್‌ಗಳೇ ಮುಂದೆ ನಿಂತು ಸಂಸ್ಮರಣೆ ಮಾಡುತ್ತಿರುವುದು ಅವರ ಒಡನಾಟ, ಪ್ರೀತಿಯ ಕ್ಷಣಗಳನ್ನು ಸ್ಮರಿಸುವಂತಿದೆ ಎಂದರು.
ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸ್ಕೂಲ್ ಬ್ಯಾಗ್‌ಗಳನ್ನು ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್‌ರವರಿಗೆ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರಾಮದಾಸ್ ಪ್ರಭು ವಹಿಸಿದ್ದರು.
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್, ಪ್ರಧಾನಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಶಿಕ್ಷಕ ದೇವದಾಸ್ ಪಾಟ್ಕರ್ ಮೃತರ ಸಾಧನೆ, ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ರವೀಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಆರ್‌ಎಸ್‌ಬಿ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಲಯನ್ಸ್ ವಲಯ ಸಂಯೋಜಕ ವಿಜಯ್ ಧೀರಜ್, ಮೃತರ ಪತ್ನಿ ಸುಮಾ ಪಾಟ್ಕರ್, ಪುತ್ರ ಹೃತ್ವಿಕ್,ಸಹೋದರ ರಾಮದಾಸ್ ಪಾಟ್ಕರ್, ತರಗತಿಯ ಸಹಪಾಠಿಗಳು ಅಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಪ್ರಭಾಕರ ಜೋಗಿ ನಿರೂಪಿಸಿದರು. ಸಹಪಾಠಿ ದಿನೇಶ್ ದೇವಾಡಿಗ ವಂದಿಸಿದರು.
