ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳ್ಮಣ್ : ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆ

Posted On: 03-06-2021 10:14PM

ಕಾಪು : ರೋಟರಿ ಕ್ಲಬ್ ಬೆಳ್ಮಣ್ ಇದರ ನೇತೃತ್ವದಲ್ಲಿ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ನಂದಳಿಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಹಾಗೂ ಕರ್ನಾಟಕ ಸರಕಾರದ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇವರು ಬಿಳಿಬೆಂಡೆಯ ಬೀಜ ವಿತರಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು ಅತ್ಯಧಿಕ ಪೌಷ್ಠಿಕಾಂಶವುಳ್ಳ ಬಿಳಿಬೆಂಡೆಯನ್ನು ಎಲ್ಲರೂ ತಮ್ಮ ಮನೆಯಂಗಳದಲ್ಲಿ ಬೆಳೆಸಿ ಎನ್ನುವ ಪ್ರೋತ್ಸಾಹಕ ಮಾತುಗಳನ್ನಾಡಿದರು, ಅಲ್ಲದೇ ಮುಂದಿನ ದಿನಗಳಲ್ಲಿ ಕಾರ್ಕಳ ಬಿಳಿಬೆಂಡೆ ಹೆಸರಲ್ಲಿ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಕಾರ್ಯಯೋಜನೆ ಮಾಡಲಾಗಿದೆ ಎಂದು ನುಡಿದರು.

ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರೇಷ್ಮಾ ಉದಯಕುಮಾರ್ ಶೆಟ್ಟಿ ಶಾಸಕರ ಕನಸಿನ ಯೋಜನೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ಕಾರ್ಯಪ್ರವೃತ್ತರಾದಲ್ಲಿ ಕಾರ್ಕಳ ಕ್ಷೇತ್ರವನ್ನು ಸ್ವರ್ಣ ಕಾರ್ಕಳ ಕ್ಷೇತ್ರವಾಗಿ ಪರಿವರ್ತಿಸುವುದು ಕಷ್ಟದ ವಿಷಯವೇ ಅಲ್ಲ ಎಂದು ನುಡಿದರು.

ವೇದಿಕೆಯಲ್ಲಿ ಬೆಳ್ಮಣ್ ರೋಟರಿಯ ಸ್ಥಾಪಕಾಧ್ಯಕ್ಷ ರೋ| ಸೂರ್ಯಕಾಂತ ಶೆಟ್ಟಿ, ಹಾಗೂ ರೋಟರಿ ಬೆಳ್ಮಣ್ಣೀನ ಪೂರ್ವಾಧ್ಯಕ್ಷ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಜೇಸಿ ಐ, ಬೆಳ್ಮಣ್ ಸ್ಪೋರ್ಟ್ಸ್ ಕ್ಲಬ್, ಗುರುದುರ್ಗಾ ಮಿತ್ರ ಮಂಡಳಿ, ಕವಿ ಮುದ್ದಣ್ಣ ಮಿತ್ರ ಮಂಡಳಿ ನಂದಳಿಕೆ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಬೆಳ್ಮಣ್ ನ ಅಧ್ಯಕ್ಷ ರೋ| ಸುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.