ಸರಕಾರವು ಗರೋಡಿಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವಿವಿಧ ವರ್ಗದವರಿಗೆ ಸಹಾಯಧನವನ್ನು ನೀಡಬೇಕು : ದಾಮೋದರ ಕಲ್ಮಾಡಿ
Posted On:
04-06-2021 06:26PM
ಉಡುಪಿ : ತುಳುನಾಡಿನಲ್ಲಿ ಸಾಮಾಜಿಕ ನ್ಯಾಯ, ಸತ್ಯ , ಪ್ರಮಾಣಿಕತೆ ಹಾಗೂ ಸ್ವಾಭಿಮಾನದ ಸಂಕೇತವಾದ ಅವಳಿ ವೀರರಾದ ಶ್ರೀ ಕೋಟಿ ಚೆನ್ನಯ್ಯರ ಆರಾಧನಾ ಕೇಂದ್ರಗಳಾದ ಗರೋಡಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಪೂ-ಪೂಜನೆಯ ಪೂಜಾರಿಗಳು, ದರ್ಶನ ಪೂಜಾರಿಗಳು, ವಾದ್ಯ ವರ್ಗದವರು, ನೃತ್ಯ ವಿಶಾರದ ಪಂಬಂದ ಪರವರು, ಮಡಿವಾಳರುಗಳು ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಈ ಎಲ್ಲಾ ವರ್ಗದವರು ಯಾವುದೇ ನಿಯಮಿತವಾದ ಉದ್ಯೋಗಗಳು ಇರುವುದಿಲ್ಲ. ಕೋವಿಡ್-19 ರ ಲಾಕ್‍ಡೌನ್ ಕಾರಣದಿಂದ ಈ ಎಲ್ಲಾ ವರ್ಗದವರಿಗೆ ಜೀವನವನ್ನು ನಡೆಸಲು ಕಷ್ಟ ಸಾಧ್ಯವಾಗುತ್ತಿದ್ದು, ಈವರೆಗೆ ಇವರಿಗೆ ಯಾವುದೇ ತರವಾದ ಸೌಲಭ್ಯಗಳು ಲಭ್ಯವಿರುವುದಿಲ್ಲ. ದಯಾಳುಗಳಾದ ತಾವು ಮುಜುರಾಯಿ ಇಲಾಖೆಯ ಅರ್ಚಕರಿಗೆ ಹಾಗೂ ಅಡುಗೆಯವರಿಗೆ ಮಸೀದಿಯ ಮೌಲ್ವಿಗಳಿಗೆ ಸಹಾಯ ಹಸ್ತವನ್ನು ನೀಡಿರುವುದು ಸಂತಸದ ವಿಷಯವಾಗಿರುತ್ತದೆ.
ಸದ್ಯ ಜೀವನ ನಿರ್ವಹಣೆ ಮಾಡಲು ಅಸಾಹಾಯಕ ಪರಿಸ್ಥಿತಿಯಲ್ಲಿರುವ ಪೂ-ಪೂಜನೆಯ ಪೂಜಾರಿಗಳು, ದರ್ಶನ ಪೂಜಾರಿಗಳು, ವಾದ್ಯ ವರ್ಗದವರು, ನೃತ್ಯ ವಿಶಾರದ ಪಂಬಂದ ಪರವರು, ಮಡಿವಾಳರುಗಳಿಗೆ ಮಾಸಿಕ ಕನಿಷ್ಠ 10000-00 ಸಹಾಯಧನವಾಗಿ ನೀಡಬೇಕೆಂದು ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಇದರ ಅಧ್ಯಕ್ಷರಾದ ದಾಮೋದರ ಕಲ್ಮಾಡಿಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ.