ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತಲ್ಮಕ್ಕಿ ಪರಿಶಿಷ್ಟ ಪಂಗಡದ ಸಮುದಾಯ ಭವನವೋ! ಇಲ್ಲ ಸಿಮೆಂಟ್ ಗೋದಾಮೋ?

Posted On: 10-06-2021 07:26PM

ಕುಂದಾಪುರ ಜೂ.9: ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ತಲ್ಮಕ್ಕಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರ ಸರಿಸುಮಾರು ಅಂದಾಜು ವೆಚ್ಚ 12 ಲಕ್ಷ ವ್ಯಯಿಸಿ ಕೆ. ಆರ್.ಐ.ಡಿ. ಎಲ್., ಉಡುಪಿ ಅಡಿಯಲ್ಲಿ 2014-15ರಲ್ಲಿ ನಿರ್ಮಾಣ ಮಾಡಿತ್ತು.

ಆದರೆ ಈ ಸಮುದಾಯ ಭವನದ ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದಾಗ ಪರಿಶಿಷ್ಟ ಪಂಗಡದ ಭವನವೋ? ಇಲ್ಲ ಸಿಮೆಂಟ್ ಗೋದಾಮೋ? ಎನ್ನುವ ಪ್ರಶ್ನೆ ಕಾಡಿದೆ. ಸಮುದಾಯದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದೆ, ಸಮುದಾಯ ಭವನದ ಹೊರಗಡೆ ಇರುವ ಸೋಲಾರ್ ದೀಪ ಕಾಣೆಯಾಗಿದೆ. ಸಮುದಾಯದ ಭವನದ ಒಳಗಡೆ ಸಹ ಯಾವುದೇ ಲೈಟ್ ಮತ್ತು ಫ್ಯಾನ್ ಕಾಣಿಸುತ್ತಿಲ್ಲ. ಸಮುದಾಯ ಭವನದ ಬಾಗಿಲಿನ ಚಿಲಕವನ್ನು ಮುರಿಯಲಾಗಿದ್ದು, ಕಬ್ಬಿಣದ ತಂತಿಯನ್ನು ಬಳಸಿ ಮುಚ್ಚಲಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಯೋ, ಗ್ರಾಮಲೆಕ್ಕಿಗ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?

ಸ್ಥಳೀಯರು ಹೇಳುವಂತೆ ಸಮುದಾಯ ಭವನದ ಒಳಗೆ ಕಬ್ಬಿಣದ ರಾಡ್, ಸಿಮೆಂಟ್ ಚೀಲಗಳ ದಾಸ್ತಾನು ಮಾಡಿದ್ದು ಹಲವು ತಿಂಗಳಿಂದ ಈ ಚಟುವಟಿಕೆ ನಡೆಯುತ್ತಿದ್ದೆ, ಆದರೂ ಎಲ್ಲಾ ಸಿಮೆಂಟ್ ಚೀಲಗಳು ಯಾರಿಗೆ ಸಂಬಂಧಪಟ್ಟಿದ್ದು? ಈ ಸಿಮೆಂಟ್ ಚೀಲಗಳನ್ನು ಇಲ್ಲಿ ಇರಿಸಲು ಅನುಮತಿ ನೀಡಿದವರಾರು? ಸಮುದಾಯ ಭವನದ ಬೀಗ ಮುರಿದರು ಇನ್ನೂ ಗ್ರಾಮ ಪಂಚಾಯತ್ ಗಮನಕ್ಕೆ ಬಾರದೆ ಇದ್ದಿದ್ದು ವಿಪರ್ಯಾಸವೇ ಸರಿ! ಆದಷ್ಟು ಬೇಗ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ವರದಿ : ಕಿರಣ್ ಕುಂದಾಪುರ