ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೊರೊನಾ ಕಷ್ಟಕಾಲದಲ್ಲಿ ಅಸಹಾಯಕರ ಪಾಲಿಗೆ ನೆರವಾಗುತ್ತಿರುವ ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ

Posted On: 10-06-2021 08:56PM

ಕಾಪು : ಕೊರೋನದಿಂದಾಗಿ ನಮಗೆಲ್ಲ ತಿಳಿದಿರುವ ಹಾಗೆ ಬಹಳಷ್ಟು ಜನರ ಜೀವನದ ದಿಕ್ಕೇ ಬದಲಾಗಿದೆ, ಬದುಕಿಗೆ ಆಸರೆಯಾಗ ಬೇಕಿದ್ದವರೇ ಕೆಲಸವಿಲ್ಲದೇ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ, ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಒಂದಾಗಿ ಒಬ್ಬರಿಗೊಬ್ಬರು ನೆರವಾಗುವುದೇ ಜೀವನ. ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ನಮ್ಮ ಕೈಯಲ್ಲಾದ ಕಿಂಚಿತು ಸಹಾಯವನ್ನು ಈ ಕೊರೋನದಿಂದ ತೊಂದರೆಯಾದ ಕುಟುಂಬಗಳಿಗೆ ನೀಡುತ್ತಾ ಬಂದಿರುತ್ತದೆ. ಹಾಗೇ ಈ ವರುಷ ಕೊರೋನ ಎರಡನೇ ಅಲೆಯ ಲಾಕ್ಡೌನ್ ಅವಧಿಯಲ್ಲಿ ಈ ತಂಡವು ಉಡುಪಿ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಕಾರ್ಯವನ್ನು ಕೈಗೆತ್ತಿಗೊಂಡಿದೆ. ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ 500 ಕ್ಕಿಂತ ಹೆಚ್ಚು ಕುಟುಂಬಗಳಿಗೆ ಜಿಲ್ಲೆಯಾದ್ಯಂತ, ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ತೀರಾ ಬಡವರಿಗೆ ಕಿಟ್ ವಿತರಿಸುವ ಕೆಲಸವನ್ನು ಕಳೆದ 10 ದಿನಗಳಿಂದ ಯಶಸ್ವಿಯಾಗಿ ಮಾಡುತ್ತ ಬಂದಿದೆ.

ಮೊದಲಿಗೆ ಸುಮಾರು ೧೦೦ ಕಿಟ್ಗಳನ್ನೂ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭವಾಯಿತು ನಂತರ ತಂಡದ ಸದಸ್ಯರ ಉತ್ತಮ ಪ್ರತಿಕ್ರಿಯೆಯಿಂದ ಸುಮಾರು 500 ಕಿಟ್ಗಳನ್ನು ಈಗಾಗಲೇ ನೀಡಿ ಇನ್ನು ಹಲವು ಕುಟುಂಬಗಳಿಗೆ ಕಿಟ್ ವಿತರಿಸುವ ಉದ್ದೇಶ ಹೊಂದಿದ್ದಾರೆ. ಈ ಕಿಟ್ಗಳನ್ನೂ ವಿತರಿಸುವ ಸಂದರ್ಭದಲ್ಲಿ ಯಾವುದೇ ಕುಟುಂಬದ ಫೋಟೋಗಳನ್ನೂ ತೆಗೆಯದೆ ಕೇವಲ ಮನೆಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹೊಸ ಆರಂಭವನ್ನು ಆರಂಭಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈ ತಂಡವು ಈಗಾಗಲೇ ಹಲವಾರು ಇಂತಹ ಜನ ಹಿತಕರವಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಆ ಬಡ ಕುಟುಂಬಗಳ ಮನೆಯ ಬಾಗಿಲಿನಲ್ಲಿ ಕಿಟ್ಗಳನ್ನು ಇಟ್ಟು ,ಆ ಮನೆಮಂದಿಯ ಮುಖದಲ್ಲೊಂದು ಸಣ್ಣ ನಗು ತರಿಸುವ ಒಂದು ಪುಟ್ಟ ಪ್ರಯತ್ನ. ಮುಂದೆ ಖಂಡಿತವಾಗಿಯೂ ಅವರ ಕಷ್ಟಕ್ಕೆ ನಾವೆಲ್ಲರೂ ಆಸರೆಯಾಗುವೆವು ಎಂಬುದು ಈ ತಂಡದ ಸದಸ್ಯರ ಗುರಿ.

ಇದರ ಜೊತೆಗೆ ಕೆಲವು ಆಶ್ರಮಗಳಿಗೆ ಆಹಾರ ಸಾಮಗ್ರಿಗಳನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಪೂರೈಸಿದ್ದಾರೆ. ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯ, ಕಾರ್ಕಳದ ಸುರಕ್ಷಾ ವೃದ್ಧಾಶ್ರಮ, ಮಂಗಳೂರಿನ ಸ್ನೇಹದೀಪ , ಮಣಿಪಾಲದ ಹೊಸಬೆಳಕು ಈ ನಾಲ್ಕು ಸಂಸ್ಥೆ ಗಳಿಗೆ ದಿನಸಿ ಸಾಮಗ್ರಿಗಳನ್ನೂ ಪೂರೈಸಿದೆ. ಹಲವು ಗ್ರಾಮ ಪಂಚಾಯತಿಯ ಆಶಾ ಕಾರ್ಯಕರ್ತರಿಗೆ ಸನ್ಮಾನ ಹಾಗು ಕಿಟ್ ವಿತರಣೆ, ಅರೋಗ್ಯ ಕೇಂದ್ರದ ದಾದಿಯರಿಗೆ ಸನ್ಮಾನ ಮತ್ತು ಕಿಟ್ಗಳನ್ನು , ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ, ಇಂತಹ ವಿವಿಧ ಕಾರ್ಯಕ್ರಮ ಗಳನ್ನೂ ನಡೆಸಿದ್ದಾರೆ.

ಈ ಕೊರೋನ ಆದಷ್ಟು ಬೇಗ ನಮ್ಮೆಲ್ಲರ ಜೀವನದಿಂದ ದೂರವಾಗಿ ನಮೆಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ , ಆರೋಗ್ಯ ಸಿಗಲೆಂದು ಆ ದೇವರಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ. ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ (MAKESOME1SMILE HELPINGHAND) ಉಡುಪಿ /ದಕ್ಷಿಣಕನ್ನಡ/ಮುಂಬೈ. Follow us on Instagram/Facebook Makesome1smile_helpinghand Logon to: www.makesome1smile.com