ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶೇಷ ಆರ್ಥಿಕ ಪ್ಯಾಕೇಜ್ ಗಾಗಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ

Posted On: 10-06-2021 09:24PM

ಉಡುಪಿ : ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ದೈವ ಚಾಕ್ರಿ ವರ್ಗವು ಜೀವನ ನಡೆಸಲು ತುಂಬಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ. ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಿಂದ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನೀಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ. ) ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಸರ್ವ ಸದಸ್ಯರ ಪರವಾಗಿ ಉಡುಪಿ ಜಿಲ್ಲಾಧಿಕಾರಿಯಾದ ಜಿ. ಜಗದೀಶ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ದೈವ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಹೇಳಿದರು. ಈಗಾಗಲೇ ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷದಿಂದ ಸರಿಯಾಗಿ ಯಾವುದೇ ಪೂಜೆ-ಪುರಸ್ಕಾರ, ವಾರ್ಷಿಕ ನೇಮೋತ್ಸವಗಳು, ಯಾವುದೇ ಇತರ ಕಾರ್ಯಗಳು ನಡೆಯಲಿಲ್ಲ. ಈ ಒಂದು ಸಂದರ್ಭದಲ್ಲಿ ಸರ್ಕಾರ ಸಂಪೂರ್ಣ ನಿಷೇಧಿಸಿದೆ.

ಸುಮಾರು ಉಡುಪಿ -ಮಂಗಳೂರಿನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ. ಲಾಕ್ ಡೌನ್ ತೆಗೆದ ನಂತರ ಮುಂದಿನ ದಿನಗಳಲ್ಲಿ 200 ಜನರ ಸೀಮಿತ ಅವಧಿಗೆ ಸರ್ಕಾರದ ಕಟ್ಟುನಿಟ್ಟಾದ ನಿಯಮ ಅನುಸಾರವಾಗಿ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಒಕ್ಕೂಟದ ಸರ್ವ ಸದಸ್ಯರು ಜಿಲ್ಲಾಧಿಕಾರಿಗೆ ವಿನಂತಿ ಮಾಡಿಕೊಂಡರು.

ಮನವಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿ ಈ ದಿನವೇ ಮುಖ್ಯಮಂತ್ರಿಗಳಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸಿಕೊಡುತ್ತೇನೆ ಎಂದು ಸರ್ವ ಸದಸ್ಯರಿಗೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಜೊತೆಗೆ ಕಾರ್ಯದರ್ಶಿ ರವೀಶ್ ಕಾಮತ್ ಹಾಗೂ ಗೌರವ ಹಿತೈಷಿಗಳಾದ ನವೀನ್ ಉಪಸ್ಥಿತಿಯಿದ್ದರು.