ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಂಜೂರು : ಸೌಹಾರ್ದತೆಗೆ ಸಾಕ್ಷಿಯಾದ ವನಮಹೋತ್ಸವ ಕಾರ್ಯಕ್ರಮ

Posted On: 30-06-2021 02:29PM

ಕಾಪು : ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಮತ್ತು ಶ್ರೀ ದುರ್ಗಾ ಮಿತ್ರವೃಂದ ಕುಂಜೂರು‌ ಇವರ ಜಂಟಿ ಆಶ್ರಯದಲ್ಲಿ ಈಸ್ಟ್ ವೆಸ್ಟ್ ನರ್ಸರಿ ಪಣಿಯೂರು ಮತ್ತು ವೆಸ್ಟ್ ಕೋಸ್ಟ್ ನರ್ಸರಿ ಮೂಳೂರು ಇವರ ಸಹಯೋಗದೊಂದಿಗೆ ಕುಂಜೂರಿನಲ್ಲಿ‌ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪರಿಸರದಲ್ಲಿ ದೇಗುಲದ ಉಪಯೋಗಕ್ಕೆ ಬೇಕಾಗುವ ವಿವಿಧ ಹೂವಿನ ಗಿಡಗಳನ್ನು ಹಾಗೂ ಇತರ ಹಣ್ಣುಗಳ ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪಣಿಯೂರು ಈಸ್ಟ್ ವೆಸ್ಟ್ ನರ್ಸರಿಯ ಮಾಲಕ ಎಂ.ಎ. ಮೂಸಾ ಅವರು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕುಂಜೂರು ದುರ್ಗಾ ಸೇವಾ ಸಮಿತಿ ಮತ್ತು ದುರ್ಗಾ ಮಿತ್ರವೃಂದದ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ. ಎಲ್. ಕುಂಡಂತಾಯ ಮಾತನಾಡಿ, ಕುಂಜೂರು ದೇಗುಲದ ಪರಿಸರದಲ್ಲಿ ದೇವಸ್ಥಾನದ ಉಪಯೋಗಕ್ಕಾಗಿ ಬಳಸುವ ಹೂವಿನ‌ ಗಿಡಗಳನ್ನು ಒದಗಿಸುವ ಮೂಲಕ ಈಸ್ಟ್ ವೆಸ್ಟ್ ನರ್ಸರಿ ಮತ್ತು ವೆಸ್ಟ್ ಕೋಸ್ಟ್ ನರ್ಸರಿಯ ಮಾಲಕರಾದ ಎಂ.ಎ. ಮೂಸಾ ಹಾಗೂ ಅನಿಲ್ ಸೋನ್ಸ್ ಅವರು ಸೌಹಾರ್ದತೆಯನ್ನು ಮೆರೆದಿದ್ದಾರೆ.‌ ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ತುಳುನಾಡಿನ ಧಾರ್ಮಿಕ ಕೇಂದ್ರಗಳಲ್ಲಿ ಪರಸ್ಪರ ಸೌಹಾರ್ದ ಮನಸ್ಸುಗಳನ್ನು ಜೋಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಆಶಿಸಿದರು.

ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ದೇವರಾಜ ರಾವ್ ನಡಿಮನೆ, ದೇಗುಲದ ಅರ್ಚಕರಾದ ಚಕ್ರಪಾಣಿ ಉಡುಪ, ರಾಮಕೃಷ್ಣ ಉಡುಪ, ರಘುಪತಿ ಉಡುಪ, ಎಲ್ಲೂರು ಗ್ರಾ. ಪಂ. ಸದಸ್ಯ ಯಶವಂತ ಶೆಟ್ಟಿ, ಉದ್ಯಮಿ ಸತೀಶ್ ಕುಂಡಂತಾಯ, ಶ್ರೀ ದುರ್ಗಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ವೈ. ಎಸ್. ಕೋಶಾಧಿಕಾರಿ ಶ್ರೀವತ್ಸ ರಾವ್, ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು, ದೇಗುಲದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ನಾಗರಾಜ ರಾವ್ ಪಣಿಯೂರು, ಶ್ರೀಧರ ಮಂಜಿತ್ತಾಯ, ವಿಶ್ವನಾಥ ಉಡುಪ, ಗೋವಿಂದ ಉಡುಪ, ಗೋವಿಂದ ದೇವಾಡಿಗ, ದಿನೇಶ್ ಕುಂಜೂರು, ಸಾಧು ಶೆಟ್ಟಿ ತೆಂಕರಲಾಕ್ಯಾರು, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಪದಾಧಿಕಾರಿಗಳಾದ ಪ್ರಕಾಶ್ ಆಚಾರ್ಯ, ಚರಣ್ ದೇವಾಡಿಗ, ಭಾರ್ಗವ ಕುಂಡಂತಾಯ, ರಾಜ ಶೆಟ್ಟಿ, ರತ್ನಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ‌

ಶ್ರೀ ದುರ್ಗಾ ಸೇವಾ‌ ಸಮಿತಿಯ ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.