ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೃಷಿ ಸಂಸ್ಕೃತಿ - ಪುನರುಜ್ಜೀವನ ಉಪಕ್ರಮ

Posted On: 17-07-2021 01:47PM

"ಬನ್ನಿ....ಸಮೃದ್ಧಿ , ಸೌಮಾಂಗಲ್ಯಕಾರಕ ಕೃಷಿಯಲ್ಲಿ ತೊಡಗೋಣ" ಎನ್ನುತ್ತಾ ಹಡೀಲು ಭೂಮಿ ಬೇಸಾಯದ ಅಭಿಯಾನ ಹಲವು ವರ್ಷಗಳಿಂದ ಅಲ್ಲಿ- ಇಲ್ಲಿ ಎಂಬಂತೆ ನಡೆಯುತ್ತಿತ್ತು. ಆದರೆ ಈ ವರ್ಷವಂತೂ ಉಭಯ ಜಿಲ್ಲೆಗಳ ಎಲ್ಲೆಡೆ ಪರಿಣಾಮಕಾರಿಯಾಗಿ ಬಹಳ ಉತ್ಸಾಹದಿಂದ ನೆರವೇರುತ್ತಿದೆ . ಬಹುತೇಕ ಹಡೀಲು ಗದ್ದೆಗಳು ಹಸಿರಿನಿಂದ ತುಂಬುತ್ತಿವೆ ; ಕಳೆಗಿಡಗಳಿಂದಲ್ಲ ನೇಜಿ (ಭತ್ತದ ಸಸಿ) ನಾಟಿಯಿಂದ. ಮಳೆಗಾಲ ಆರಂಭವಾಗುತ್ತಿರುವಂತೆ ಎಲ್ಲೆಡೆ ಹಸಿರು ಚಿಗುರುತ್ತವೆ , ಕೃಷಿ ಭೂಮಿಯಲ್ಲೂ ಒಂದಷ್ಟು ಹುಲ್ಲು ಬೆಳೆಯುತ್ತದೆ .ರೈತ ಗದ್ದೆಗಿಳಿದು ಬೇಸಾಯಕ್ಕೆ ತೊಡಗದಿದ್ದರೆ ಕಳೆಗಿಡಗಳು, ಗಿಡಗಂಟಿಗಳು ಬೆಳೆಯುತ್ತವೆ. ವರ್ಷಗಟ್ಟಲೆ ಗದ್ದೆಗಿಳಿಯದಿದ್ದರೆ ಆ ಭೂಮಿ ಹಡೀಲು ಭೂಮಿಯಾಗುತ್ತದೆ . ಇಂತಹ ಗದ್ದೆಗಳಲ್ಲಿ‌ ಮತ್ತೆ ಬೇಸಾಯ ಆರಂಭಿಸುವುದಕ್ಕೆ ಮನಸ್ಸುಬೇಕು, ಪ್ರಯತ್ನಬೇಕು, ಇಚ್ಛಾಶಕ್ತಿ ಬೇಕು. ಈ ಪ್ರಾಮಾಣಿಕ ಸಾಹಸ ಈಗ ನಡೆಯುತ್ತಿವೆ . ಹೇಗೆ ನಡೆಯುತ್ತಿದೆ ,ಯಾರೆಲ್ಲ ಭಾಗವಹಿಸುತ್ತಿದ್ದಾರೆ ಎಂಬುದು ಮುಖ್ಯ. ಇದರಿಂದ ಅಭಿಯಾನದ ಭವಿಷ್ಯವನ್ನು ಕಲ್ಪಿಸಬಹುದು. 'ಹಡೀಲು ಭೂಮಿ ಬೇಸಾಯ' ಈ ಅಭಿಯಾನದ ಸಂಘಟಕರು ಯಾರು ,ಯಾರ ನೇತೃತ್ವದಲ್ಲಿ ಈ ಅಭಿಯಾನ ಹಳ್ಳಿಹಳ್ಳಿಗಳಲ್ಲೂ ನಡಯುತ್ತಿವೆ ಎನ್ನುವಷ್ಟೇ ಗದ್ದೆಗಳಲ್ಲಿ ಯಾರು ಸಕ್ರಿಯರಾಗಿದ್ದಾರೆ ಎಂಬುದನ್ನು ಗಮನಿಸಿದರೆ ಈ ಅಭಿಯಾನದ ಭವಿಷ್ಯವನ್ನು ಸಹಜವಾಗಿ ತರ್ಕಿಸಬಹುದು.

ಯುವಕರು, ಕಾಲೇಜು ವಿದ್ಯಾರ್ಥಿ - ವಿದ್ಯಾರ್ಥಿನಿಯರು, ಹೈಸ್ಕೂಲ್ ವಿದ್ಯಾರ್ಥಿಗಳು , ಎನ್ ಸಿಸಿ , ರಾಷ್ಟ್ರೀಯ ಸೇವಾ ಯೋಜನೆಯ ಸಕ್ರಿಯ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಮಣ್ಣಿನೊಂದಿಗೆ ಹೊಂದಿಕೊಳ್ಳುತ್ತಿದ್ದಾರೆ . ಆಟಿಯಲ್ಲಿ ಒಂದು ದಿನ ,ಕೆಸರಿನಲ್ಲಿ ಒಂದು ದಿನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳಿಂದ ಮಣ್ಣಿನ ಗಂಧವನ್ನು ಗ್ರಹಿಸಿದ್ದ ಬಾಲಕರು, ವಿದ್ಯಾರ್ಥಿಗಳು , ಯುವಕರು ಆಟ ಆಡಲು ಗದ್ದೆಗಿಳಿದಿದ್ದರೆ ಈಗ ಕ್ರಮೇಣ ಗದ್ದೆಗೆ ಕೃಷಿ ಕಾಯಕಕ್ಕಾಗಿ ಇಳಿಯುತ್ತಿದ್ದಾರೆ. ಈ ಬದಲಾದ ಮನೋಧರ್ಮಗಳು ಗದ್ದೆಗಳಲ್ಲಿ ಓಡಾವುದನ್ನು ಕಂಡರೆ ನಿರೀಕ್ಷೆಗಳು ಬಲವಾಗುತ್ತವೆ .ಬೇಸಾಯ ಮತ್ತೆ ಸಂಭ್ರಮಿಸುತ್ತದೆ ಎಂದನ್ನಿಸುತ್ತದೆ. ಅಭಿಯಾನ ಯಶಸ್ವಿಯಾಗುವುದು ಯುವ ಸಮುದಾಯದ ಪ್ರಾಮಾಣಿಕ ಉತ್ಸಾಹದಿಂದ ತಾನೆ ?. ಸಂಘಟನೆಗಳ ಕೆಲಸವೂ ಮುಖ್ಯವೇ .ಆದರೆ ಯುವಕರು , ವಿದ್ಯಾರ್ಥಿಗಳು, ಬಾಲಕರು ಮುನ್ನೆಲೆಗೆ ಬರಬೇಕು . ಕೊರೊನ ಕಾರಣವಾಗಿ ಪರವೂರಿನಲ್ಲಿ , ಪರದೇಶಗಳಲ್ಲಿ ಬೇರೆಬೇರೆ ಉದ್ಯೋಗಗಳಲ್ಲಿ ದುಡಿಯುತ್ತಿದ್ದವರು ಹುಟ್ಟೂರಿಗೆ ಹಿಂದಿರುಗಿದ್ದರು . ತಮ್ಮ ಗದ್ದೆಗಳು ಹಡೀಲು ಬಿದ್ದ ಬಗ್ಗೆ ಮನಗಂಡಿದ್ದಾರೆ. ಸ್ವಲ್ಪ ಮಟ್ಟಿಗೆ ಕೃಷಿಗೆ ತೊಡಗಿದ್ದೂ ಇದೆ , ಗದ್ದೆಗೂ ಇಳಿದದ್ದೂ ಇದೆ . ಪ್ರಸ್ತುತ ಮರಳಿ ಉದ್ಯೋಗದತ್ತ ಹಿಂದಿರುಗಿದರೂ ನಿವೃತ್ತಿಯ ಬಳಿಕ ಮತ್ತೆ ಹುಟ್ಟೂರಿಗೆ ಬಂದು ಬೇಸಾಯದ ಭೂಮಿಗಳಲ್ಲಿ ಕೃಷಿಗೆ ಪ್ರವೃತ್ತರಾಗಬೇಕೆಂಬ ಆಲೋಚನೆ ಇದೆ , ಇಲ್ಲ ನಿಶ್ಚಯಿಸಿದ್ದೇವೆ ಎನ್ನುವ ಮಾತು ಕೇಳಿ ಬರುತ್ತಿದೆ .ಹಾಗಾದರೆ 'ಕೃಷಿ ಸಂಸ್ಕೃತಿ' ಮರಳಿ ಒದಗಿಬರುತ್ತದೆ ?

ಕೃಷಿ ಎಂದರೆ ಸುಭಿಕ್ಷೆ : ಭಾರತ ಹಳ್ಳಿಗಳ ದೇಶ ,ಕೃಷಿಯೇ ಜೀವನಾಧಾರವಾಗಿ ಅಭಿವೃದ್ಧಿ ಹೊಂದಿದ ದೇಶ. ನಮ್ಮ ಸಂಪತ್ತಿನ - ಆರ್ಥಿಕ ಸಬಲತೆಯ ಮೂಲವೇ 'ಕೃಷಿ'. 'ಕೃಷಿ ಎಂದರೆ ಸುಭಿಕ್ಷೆ , ಆದುದರಿಂದ ಅತಿಶಯ ಕೃಷಿ ಹುಟ್ಟುವಳಿಯಿಂದ ಖಂಡಿತಾ ದುರ್ಭಿಕ್ಷೆ ಇಲ್ಲ'. ಇದನ್ನು ನಂಬಿ ನಮ್ಮ ಪೂರ್ವಸೂರಿಗಳು ಬದುಕು ಕಟ್ಟಿದರು ಸುಭಗತೆ , ಸಿರಿವಂತಿಕೆಯ ಬಾಳು ಬಾಳಿದರು.

ನದಿ ದಡಗಳಲ್ಲಿ 'ಕೃಷಿ ಸಂಸ್ಕೃತಿ' ಬೆಳೆಯಿತು , ನಾಗರಿಕತೆ ಸಹಜವಾಗಿ ವಿಕಾಸಗೊಂಡಿತು . ಅದ್ಭುತ ಜ್ಞಾನ ,ದೇಸಿ ಅನುಭವಗಳಿಗೆ ಕೃಷಿಯಾಧರಿತ ಬದುಕು ಆಧಾರವಾಯಿತು . ಬಹುತೇಕ ಭಾರತೀಯ ಉತ್ಕೃಷ್ಟ ದರ್ಶನಗಳು ಅರಣ್ಯದಿಂದ ಬಂದುವು , ಕೃಷಿ ಬದುಕಿನೊಂದಿಗೆ ಸಮ್ಮಿಳಿತಗೊಂಡು ಉದಾತ್ತ ಆದರ್ಶ - ಮೌಲ್ಯ'ಗಳಾದುವು. ನಮ್ಮದೇಶ ವಿಶ್ವಕ್ಕೆ "ಉಪದೇಶಕ" ಸ್ಥಾನಕ್ಕೆ ಏರಲು ಕೃಷಿಯಿಂದ ಪ್ರಾಪ್ತಿಯಾದ ಸೌಭಾಗ್ಯ - ಸುಭಿಕ್ಷೆ ಕಾರಣ , ಆ ಹಂತದಲ್ಲಿ ಜೀವನ ಧರ್ಮಕ್ಕೆ ಶಿಷ್ಟ - ಜನಪದ ವ್ಯಾಖ್ಯಾನ ದೊರೆಯಿತು,ಈ ಜ್ಞಾನ ಕೃಷಿಯ ಮಹೋನ್ನತ ಕೊಡುಗೆ .'ಸುಭಿಕ್ಷಂ ಕೃಷಕೇ ನಿತ್ಯಂ ... - ವ್ಯವಸಾಯಗಾರನಿಗೆ ನಿತ್ಯವೂ ಸುಭಿಕ್ಷವೇ' ಎಂಬ ಮಾತು ಜನಜನಿತವಾಗಿತ್ತು. ಲೇಖನ :ಕೆ.ಎಲ್.ಕುಂಡಂತಾಯ