ಇನ್ನಂಜೆ : ಮಡುಂಬು ಮರ್ಕೋಡಿಯಲ್ಲಿ ತ್ಯಾಜ್ಯ ಎಸೆದವರಿಗೆ ತಕ್ಕ ಬುದ್ಧಿ ಕಲಿಸಿದ ಗ್ರಾಮಸ್ಥರು
Posted On:
30-07-2021 02:55PM
ಕಾಪು : ಕಾಪುವಿನ ಶಂಕರಪುರ ಸಂಪರ್ಕ ರಸ್ತೆಯಲ್ಲಿ ಸಿಗುವ ಇನ್ನಂಜೆ ಗ್ರಾಮದ ಮಡುಂಬು, ಮರ್ಕೋಡಿ ಸುದೆಯಲ್ಲಿ ಮತ್ತು ಮರ್ಕೋಡಿ ಪರಿಸರದ ರಸ್ತೆಯಲ್ಲಿ ಪಾದಚಾರಿಗಳು ಮತ್ತು ವಾಹನ ಸವಾರರು ತ್ಯಾಜ್ಯವನ್ನು ಎಸೆಯುತ್ತಿದ್ದು, ತ್ಯಾಜ್ಯದ ರಾಶಿಯನ್ನು ಈ ಹಿಂದೆ ಇನ್ನಂಜೆ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಸೇರಿ ತೆರವುಗೊಳಿಸಿದ್ದರು. ಈ ಬಗ್ಗೆ ನಮ್ಮ ಕಾಪು ನ್ಯೂಸ್ ಮಾಧ್ಯಮದ ಮೂಲಕ ಖಡಕ್ ಎಚ್ಚರಿಕೆ ಕೂಡ ನೀಡಿದ್ದರು. ಎಚ್ಚರಿಕೆ ನೀಡಿದ ನಂತರವು ಒಂದೆರಡು ತ್ಯಾಜ್ಯದ ಗೋಣಿಗಳು ಇಲ್ಲಿ ಬೀಳುತಿದ್ದುದು ಕಂಡುಬಂದಿತ್ತು.
ಇಂದು (30/07/2021) ಎರಡು ತ್ಯಾಜ್ಯದ ಗೋಣಿಗಳು ಮರ್ಕೋಡಿ ಪರಿಸರದಲ್ಲಿ ಕಂಡು ಬಂದಿದ್ದು. ತ್ಯಾಜ್ಯವನ್ನು ಬಿಡಿಸಿ ನೋಡಿದಾಗ ಅದರಲ್ಲಿ ಅಲೆವೂರು ಗ್ರಾಮಸ್ಥರೊಬ್ಬರ ನಂಬರ್ ಪತ್ತೆಯಾಯ್ತು. ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯ ದಿವೇಶ್ ಶೆಟ್ಟಿ ಕಲ್ಯಾಲು ಇವರು ನಂಬರ್ ಗೆ ಕರೆ ಮಾಡಿದಾಗ ಗುಜುರಿ ವ್ಯಾಪಾರಸ್ಥರು ಈ ತ್ಯಾಜ್ಯವನ್ನು ಕೊಂಡು ಹೋಗಿರುವುದಾಗಿ ತಿಳಿಸಿದರು. ಗುಜುರಿ ವ್ಯಾಪಾರಸ್ಥರ ಸಂಪರ್ಕ ಸಂಖ್ಯೆಯನ್ನು ಪಡೆದು ಅವರನ್ನು ಸ್ಥಳಕ್ಕೆ ಕರೆಸಿ ಕಾಪು ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ, ಅವರಿಂದಲೇ ಆ ತ್ಯಾಜ್ಯವನ್ನು ಮತ್ತು ಮರ್ಕೋಡಿ ಪರಿಸರದಲ್ಲಿ ಇದ್ದಂತಹ ಇತರ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಮತ್ತು ಇನ್ನಂಜೆ ಗ್ರಾಮ ಪಂಚಾಯತ್ನಲ್ಲಿ 2,000 ರೂಪಾಯಿ ಮೊತ್ತದ ದಂಡವನ್ನು ಕೂಡ ವಿಧಿಸಲಾಯಿತು. ತಪ್ಪಿತಸ್ಥರನ್ನು ಬೆಳಪು ನಿವಾಸಿ ಹಮೀದ್ ಮತ್ತು ಅಲ್ತಾಫ್ ಎಂದು ಗುರುತಿಸಲಾಗಿದೆ.
ಸ್ಥಳದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ PDO ಮಂಜುನಾಥ್ ಆಚಾರ್ಯ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಮಂಡೇಡಿ, ಗ್ರಾ. ಪಂ ಸದಸ್ಯ ದಿವೇಶ್ ಶೆಟ್ಟಿ ಕಲ್ಯಾಲು ಗ್ರಾಮಸ್ಥರಾದ ಬಾಲಕೃಷ್ಣ ಆರ್ ಕೋಟ್ಯಾನ್, ಉಮೇಶ್ ಅಂಚನ್, ಪೊಲೀಸ್ ಸಿಬ್ಬಂದಿ ಅಮೃತೇಶ್ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಹರೀಶ್ ಮತ್ತು ಸಂದೀಪ್ ಹಾಜರಿದ್ದರು.