ಕಾಪು : ಜನಸಂಪರ್ಕ ಜನ ಸೇವಾ ವೇದಿಕೆ ಕಳತ್ತೂರು-ಕಾಪು ಇವರ ಆಶ್ರಯದಲ್ಲಿ ಕೊರೋನಾ ವಾರಿಯರ್ಸ್ಗಳ ನೆಲೆಯಲ್ಲಿ ಕಾಪು ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಶನಿವಾರ ಕಾಪು ಪ್ರಧಾನ ಅಂಚೆ ಕಛೇರಿಯಲ್ಲಿ ಸಮ್ಮಾನಿಸಿ, ಅಭಿನಂದಿಸಲಾಯಿತು.
ಅದ್ಯಕ್ಷತೆ ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧಿಕ್ಷಕ ನವೀನ್‌ಚಂದ್ರ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ದಣಿವರಿಯದ ಸೇವೆ ಸಲ್ಲಿಸಿದ ಅಂಚೆ ಇಲಾಖೆಯ ಸಿಬಂದಿಗಳನ್ನು ಸಮ್ಮಾನಿಸಿರುವುದು ಇದೇ ಪ್ರಥಮವಾಗಿದೆ. ಕೊರೊನಾ ವಾರಿಯರ್‌ಗಳಾದ ಅಂಚೆ ಸಿಬಂದಿಗಳನ್ನು ಸಮ್ಮಾನಿಸುವ ಮೂಲಕ ಅಂಚೆ ಇಲಾಖೆಯ ಸೇವೆಯನ್ನು ಹತ್ತಿರದಿಂದ ಗುರುತಿಸಿದಂತಾಗಿದೆ ಎಂದರು.
ಕಾಪು - ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಳತ್ತೂರು ಕುಶಲಶೇಖರ ಶೆಟ್ಟಿ ಇಂಟರ್‌ನ್ಯಾಷನಲ್ ಹಾಲ್‌ನ ಆಡಳಿತ ನಿರ್ದೇಶಕ ಶೇಖರ ಬಿ. ಶೆಟ್ಟಿ ಕಳತ್ತೂರು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಕಾಪು - ಕಳತ್ತೂರು ಜನಸಂಪರ್ಕ ಜನ ಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ, ಗೌರವ : ಕಾಪು ಅಂಚೆ ಕಛೇರಿಯ ಅಂಚೆ ಪಾಲಕ ಕೃಷ್ಣಪ್ಪ, ಅಂಚೆ ಸಹಾಯಕರಾದ ರಮೇಶ್, ಸುಧಾಕರ್, ಕೃಷ್ಣಾನಂದ್, ಅಂಚೆ ಪೇದೆಗಳಾದ ನವೀನ್ ಕುಮಾರ್, ರಮೇಶ್ ನಾಯ್ಕ್, ಅಂಚೆ ಸೇವಕರಾದ ಕುಮಾರ್, ರೋಶನ್, ಪ್ರಮೋದ್, ಸೃಷ್ಠಿ ಮೊದಲಾದವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಕಾಪು - ಕಳತ್ತೂರು ಜನಸಂಪರ್ಕ ಜನ ಸೇವಾ ವೇದಿಕೆಯ ಸಂಚಾಲಕ ದಿವಾಕರ್ ಡಿ. ಶೆಟ್ಟಿ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ದಯಾನಂದ ಶೆಟ್ಟಿ ದೆಂದೂರುಕಟ್ಟೆ ಸ್ವಾಗತಿಸಿದರು. ಅಂಚೆ ಮೇಲ್ವಿಚಾರಕ ವಾಸುದೇವ ತೊಟ್ಟಂ ವಂದಿಸಿದರು.