ಶಿರ್ವ : ಕಸ ಬಿಸಾಡುವವರ ವಿವರ ನೀಡಿದವರಿಗೆ ಗ್ರಾ.ಪಂ ನಿಂದ ಬಹುಮಾನ
Posted On:
02-08-2021 10:12PM
ಕಾಪು : ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಕಸ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇದ್ದರೂ ಅದನ್ನು ಜನರು ಬಳಸದಿರುವುದು ಒಂದು ದೊಡ್ಡ ಸಮಸ್ಯೆಯಾಗುತ್ತಿದೆ. ಕೆಲವರು ತಮಗೆ ಬೇಕಾದಲ್ಲಿ ಕಸ ಬಿಸಾಡುವ ಮೂಲಕ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಇಂತವರಿಗೆ ಸೂಕ್ತ ದಂಡ ಹಾಗೆಯೇ ಕಸ ಬಿಸಾಡುವವರ ಮಾಹಿತಿ ನೀಡಿದವರಿಗೆ ಬಹುಮಾನವನ್ನು ನೀಡುವುದಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ಘೋಷಿಸಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಶಿರ್ವ ಗ್ರಾಮ ಪಂಚಾಯತ್ ನ ಕಸ ಸಂಗ್ರಹ ವಾಹನವು ದಿನಾ ಅಥವಾ ಕೆಲವು ಕಡೆ ವಾರದಲ್ಲಿ ಒಂದೆರಡು ಬಾರಿ ಪ್ರತಿ ವಾರ್ಡುಗಳಲ್ಲಿ ಪ್ರತೀ ಮಾರ್ಗದಲ್ಲಿ ಸಂಚರಿಸಿ ಪ್ರತೀ ಮನೆ, ಅಂಗಡಿ, ಹೋಟೇಲುಗಳಿಂದ ಕಸ ಸಂಗ್ರಹಿಸುತ್ತಿದೆ. ಗ್ರಾಮಸ್ಥರು ಈ ವಾಹನಕ್ಕೆ ತಮ್ಮ ಮನೆಯ ಒಣ ಕಸವನ್ನು ನೀಡಬೇಕು. ಹಸಿ ಕಸವನ್ನು ತಮ್ಮ ಮನೆಯ ಹಂತದಲ್ಲೆ ವಿಲೇವಾರಿ ಮಾಡಬೇಕು. ಯಾವ ಮಾರ್ಗದಲ್ಲಿ ಅಥವಾ ಯಾವ ಏರಿಯಾದಲ್ಲಿ ಈ ವಾಹನ ಬರುವುದಿಲ್ಲವೊ ಅವರು ಈ ಸಂಖ್ಯೆಗಳಿಗೆ ಕರೆ ಮಾಡಿ. ಕಿಶೋರ್ 9980141966 , ರಕ್ಷಿತ್ 9702513333.
ಕಸವನ್ನು ರಸ್ತೆಗೆ ಬಿಸಾಡಿದರೆ 5000 ದಂಡ ಕೆಲವರು ತಮ್ಮ ಮನೆಯ ಕಸ ,ಉಳಿದ ಆಹಾರ ಪದಾರ್ಥ, ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ , ಹತ್ತಿರದ ಕಾಡು ಪ್ರದೇಶ, ಒಳದಾರಿಗಳಲ್ಲಿ ಬಿಸಾಡಿ ನಾವು ಅತೀ ಬುದ್ದಿವಂತರೆನಿಕೊಳ್ಳುತ್ತಿದ್ದಾರೆ. ಇಂತಹವರನ್ನು ಹಿಡಿಯಲು ಬೇರೆ ಬೇರೆ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು ಸಿಕ್ಕಿಬಿದ್ದರೆ ಅವರಿಗೆ ಗರಿಷ್ಠ ರೂ 5000 ದಂಡ ಹಾಕುವ ಅವಕಾಶವಿದ್ದು, ದಂಡದೊಂದಿಗೆ ಅವರ ವಿವರವನ್ನು ಸಮಾಜಿಕ ಜಾಲ ತಾಣಗಳಲ್ಲಿ ಹಾಕಲಾಗುವುದು ಎಂದರು.
ಕಸ ಬಿಸಾಡುವವರನ್ನು ಗುರುತಿಸಿದರೆ ಪಂಚಾಯತ್ ನಿಂದ ಬಹುಮಾನ : ಮನೆಯ ಕಸ, ತ್ಯಾಜ್ಯ, ಮಧ್ಯ ಬಾಟಲಿಗಳನ್ನು ರಸ್ತೆ, ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವವರನ್ನು ಗುರುತಿಸಿ ಪಂಚಾಯತ್ ಗೆ ತಿಳಿಸಿದರೆ ಅವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು. ( ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು)
ಈ ರೀತಿಯಲ್ಲಿ ಬಿಸಾಡುವವರನ್ನು ಯಾವುದೇ ರೀತಿಯಲ್ಲಾದರೂ ಹಿಡಿದೇ ಹಿಡಿಯುತ್ತೇವೆ.
ಗ್ರಾಮಸ್ಥರೇ ನಾವು ಬುದ್ದಿವಂತರು, ಶಿಕ್ಷಣವಂತರು ದಯವಿಟ್ಟು ನಮ್ಮ ಗ್ರಾಮವನ್ನು ಸ್ವಚ್ಚವಾಗಿಡಲು ನಮ್ಮೊಂದಿಗೆ ಸಹಕರಿಸಿ ಎಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಆರ್. ಪಾಟ್ಕರ್ ಮತ್ತು ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ವಿನಂತಿಸಿಕೊಂಡಿದ್ದಾರೆ.