ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಹೆಬ್ರಿ ಘಟಕದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ, ಧನಸಹಾಯ
Posted On:
09-08-2021 10:57PM
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ(ರಿ) ಉಡುಪಿ ಜಿಲ್ಲೆ, ಹೆಬ್ರಿ ಘಟಕದ ಮೊದಲನೇ ವರ್ಷದ ವಾರ್ಷಿಕ ಸಮಾರಂಭ ಹಾಗೂ ಹಿರಿಯ ದೈವ ಚಾಕ್ರಿ ಮಾಡುವವರಿಗೆ ಸನ್ಮಾನ ಕಾರ್ಯಕ್ರಮ ತಾಣ ಅರ್ಧ ನಾರೀಶ್ವರ ದೇವರ ಸನ್ನಿಧಿಯ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಇಂಧನ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಚಿವನಾದ ನಂತರ ದೈವಾರಾಧನೆ ಒಕ್ಕೂಟದ ಕಾರ್ಯಕ್ರಮ ನನ್ನ ಮೊದಲ ಕಾರ್ಯಕ್ರಮ. ಎಂದು ತುಂಬಾ ಸಂತೋಷದಿಂದ ಹೇಳಿದರು. ಮುಂದಿನ ದಿನಗಳಲ್ಲಿ ದೈವ ಚಾಕ್ರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು ಒದಗಿಸುವ ಯೋಜನೆಯನ್ನು ಕಾರ್ಯ ರೂಪಿಸಲು ಪ್ರಯತ್ನ ಮಾಡುತ್ತೇನೆ ಹಾಗೂ ದೈವಾರಾಧನೆ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಆಕಾಡೆಮಿ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟವನ್ನು ಎಲ್ಲರೂ ಸೇರಿ ಬಲಪಡಿಸಿ ಎಂದು ಶುಭ ಹಾರೈಸಿದರು.
ದೈವ ಚಿಂತಕರಾದ ಸುಧಾಕರ್ ಡಿ. ಅಮೀನ್ ಮಾತನಾಡಿ ದೈವಾರಾಧನೆ ಆಚಾರ-ವಿಚಾರ ಉಳಿಸಿ ಹಾಗೂ ಮುಂದಿನ ದಿನಗಳಲ್ಲಿ ನನ್ನಿಂದ ಯಾವುದೇ ಸಮಯದಲ್ಲಿ ಒಕ್ಕೂಟಕ್ಕೆ ಸಹಾಯ ಹಸ್ತ ಬೇಕಿದ್ದರೆ ನಿಮ್ಮೊಂದಿಗೆ ಸದಾ ಬೆಂಬಲವಾಗಿ ನಾನಿರುತ್ತೇನೆ ಎಂದು ಶುಭ ಹಾರೈಸಿದರು.
ಪ್ರಸನ್ನಕುಮಾರ್ ರಾಜ್ಯ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ ಮಾತನಾಡಿ ಸದಾ ದೈವ ಚಾಕ್ರಿಯವರಿಗೆ ಬೆಂಬಲವಾಗಿ ನಮ್ಮ ರಕ್ಷಣಾ ವೇದಿಕೆ ನಿಮ್ಮೊಂದಿಗೆ ಇರುತ್ತೇವೆ. ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಕ್ಕೆ ದೈವ ಚಾಕ್ರಿಯವರ ಪರವಾಗಿ ಮನವಿಯನ್ನು ಸಲ್ಲಿಸುತ್ತೇವೆ ಎಂದು ಒಕ್ಕೂಟದ ಸದಸ್ಯರಿಗೆ ಧೈರ್ಯ ತುಂಬಿದರು.
ನಂತರ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಮಾತನಾಡಿ ಯಾವುದೇ ದೈವ ಚಾಕ್ರಿಯವರ ತುರ್ತು ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಹಾಗೂ ದೈವಾಧೀನರಾದಾರೆ ಹಾಗೂ ಮಳೆಗಾಲ ಸಂದರ್ಭದಲ್ಲಿ ಅವರ ಮನೆಗೆ ಹಾನಿ ಉಂಟಾದರೆ ಅವರ ಮನೆಗೆ ಒಕ್ಕೂಟ ಸದಸ್ಯರು ಭೇಟಿಕೊಟ್ಟು ಸ್ವಲ್ಪಮಟ್ಟಿಗೆ ಧನ ಸಹಾಯ ಮಾಡಿದ ಒಂದು ಒಕ್ಕೂಟ ಇದ್ದರೆ ಅದು ನಮ್ಮ ದೈವಾರಾಧಕರ ಒಕ್ಕೂಟ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಇತಿಹಾಸದಲ್ಲಿ ಇಷ್ಟರತನಕ ದೈವ ಚಾಕ್ರಿಯವರ ಪರವಾಗಿ ಎಲ್ಲಾ ತುಳುನಾಡಿನ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಯವರಿಗೆ, ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೊಟ್ಟಿದ್ದರೆ, ಅದು ನಮ್ಮ ದೈವಾರಾಧಕರ ಒಕ್ಕೂಟ ಎಂದು ಹೇಳಿದರು ಹಾಗೂ ಒಕ್ಕೂಟ ನಡೆದುಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಮಾಳ, ಶೇಕರ ಬಂಗೇರ, ಶ್ರೀಧರ ಪೂಜಾರಿ ಬೈಕಾಡಿ, ನರಸಿಂಹ ಪರವ ಹಾಗೂ ಪ್ರಮುಖ ಅತಿಥಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಾಣಾರ ಆರ್ಡಿಯವರನ್ನು ಒಕ್ಕೂಟದ ಪರವಾಗಿ ಸನ್ಮಾನ ಮಾಡಲಾಯಿತು. ಹೆಬ್ರಿ ಘಟಕದ 20 ಮಂದಿ ಹಿರಿಯ ದೈವ ಚಾಕ್ರಿ ವರ್ಗದವರಿಗೆ ಧನ ಸಹಾಯದೊಂದಿಗೆ ಗೌರವಿಸಲಾಯಿತು. ಹೆಬ್ರಿ ಘಟಕದ ಅಧ್ಯಕ್ಷರಾದ ಸುಕುಮಾರ್ ಪೂಜಾರಿ ಸ್ವಾಗತಿಸಿ, ಹೆಬ್ರಿ ಘಟಕದ ಕೋಶಾಧಿಕಾರಿ ಅರುಣ್ ಪೂಜಾರಿಯವರು ವಂದಿಸಿದರು.