ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಾಮಾಜಿಕ ಜಾಲತಾಣಗಳ ಸ್ಪರ್ಧೆಗಳಿಂದ ಸಾಹಿತ್ಯದ ಗುಣಮಟ್ಟ ಕುಸಿದಿದೆ : ಹಾ. ಮ. ಸತೀಶ

Posted On: 23-08-2021 04:52PM

ಕಾಪು : ಪ್ರತೀ ದಿನ, ಪ್ರತಿ ವಾರ ನಿರಂತರವಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುವ ಉದ್ಧೇಶದಿಂದಲೇ ವಾಟ್ಸಾಪ್ ಸಾಹಿತ್ಯ ಬಳಗಗಳನ್ನು ರೂಪಿಸುವುದು ಎಷ್ಟು ಮಾತ್ರಕ್ಕೂ ಸಲ್ಲದು. ಇದರಿಂದಾಗಿ ಉದಯೋನ್ಮುಖ ಬರಹಗಾರರಲ್ಲಿ ಪ್ರಶಸ್ತಿ, ಬಹುಮಾನಗಳ ಹಂಬಲ ಹೆಚ್ಚಿ ಅವರು ಕೃತಿಚೌರ್ಯ ಮಾಡಲು ಮುಂದಾಗುತ್ತಾರೆ. ಇಂಥ ಬೆಳವಣಿಗೆ ಸಾಹಿತ್ಯಕ್ಕೆ ಮಾರಕ ಎಂದು ಖ್ಯಾತ ಕವಿ, ಬರಹಗಾರ, ಶಿಕ್ಷಕ ಬೆಂಗಳೂರಿನ ಹಾ. ಮ. ಸತೀಶ ಅವರು ಹೇಳಿದರು. ಅಖಿಲ ಕರ್ನಾಟಕ ಬರಹಗಾರರ ವೇದಿಕೆಯು ಗೂಗಲ್ ಮೀಟ್ ಮೂಲಕ ನಡೆಸಿದ "ವಾಟ್ಸಾಪ್ ಸಾಹಿತ್ಯ ಬಳಗಗಳು ಮತ್ತು ಉದಯೋನ್ಮುಖ ಬರಹಗಾರರು" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಉದಯೋನ್ಮುಖರು ಸ್ವಂತಿಕೆಯನ್ನು ಅಳವಡಿಸಿಕೊಂಡು ಸಾಹಿತ್ಯದಲ್ಲಿ ಮೇಲೆ ಬರಬೇಕು. ಕಾವ್ಯದಲ್ಲಿ ಪೀಠಿಕೆ, ವಿಷಯ ಮತ್ತು ಮುಕ್ತಾಯ ಬೇಕು. ಆದರೆ ಉದಯೋನ್ಮುಖರ ಕಾವ್ಯದಲ್ಲಿ ಇದರ ಕೊರತೆ ಕಾಣುತ್ತಿದೆ. ಯಾರೇ ಆಗಲಿ ಯಾವುದೇ ಬಳಗಕ್ಕೆ ಸೇರುವ ಮೊದಲು ಆ ಬಳಗದ ಉದ್ಧೇಶಗಳನ್ನು ತಿಳಿದುಕೊಂಡು ಸೇರಬೇಕು ಎಂದು ಹಾ. ಮ. ಸತೀಶ ಅವರು ಕಿವಿಮಾತು ಹೇಳಿದರು. ಅವರು ತಮ್ಮ ಉಪನ್ಯಾಸದಲ್ಲಿ ವಾಟ್ಸಾಪ್ ಬಳಗಗಳು ಬರುವ ಮೊದಲು ಸಾಹಿತ್ಯ ಬಳಗಗಳು ಮತ್ತು ಅವುಗಳನ್ನು ನಂಬಿದ್ದ ಬರಹಗಾರರು ಹೇಗಿದ್ದರು ಎಂಬುವುದರ ಬಗ್ಗೆ ವಿವರವಾಗಿ ತಿಳಿಸಿದರು. ಅಂದು ಬರಹಗಾರರಲ್ಲಿ ಕಲಿಯುವ ಹಂಬಲವಿತ್ತು. ಆದರೆ ಇಂದು ಕಲಿಯುವ ಹಂಬಲ ಕ್ಷಣಿಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಸಾಹಿತ್ಯದ ಗುಣಮಟ್ಟ ಕುಸಿದಿದೆ ಎಂದರು. ನಿರಂತರ ಓದು, ಕಲಿಯುವಿಕೆ, ಕಲಿತದ್ದನ್ನು ಮನನ ಮಾಡಿಕೊಂಡು ತನ್ನದೇ ಆದ ಸ್ವಂತಿಕೆ ಮತ್ತು ಶೈಲಿಯಲ್ಲಿ ಬರೆದಾಗಲೇ ಒಬ್ಬ ಒಳ್ಳೆಯ ಬರಹಗಾರನಾಗಲು ಸಾಧ್ಯವೆಂದು ಹಾ. ಮ. ಸತೀಶ ಅವರು ತಿಳಿಸಿದರು.

ವಾಟ್ಸಾಪ್ ಸಾಹಿತ್ಯ ಬಳಗಗಳು, ಸ್ಪರ್ಧೆಗಳು, ಅಡ್ಮಿನ್ ಗಳು, ತೀರ್ಪುಗಾರರು, ಬಹುಮಾನ - ಪ್ರಶಸ್ತಿಗಳು ಇತ್ಯಾದಿ ವಿಷಯಗಳ ಬಗ್ಗೆ ಸಂವಾದ ನಡೆಯಿತು. ಸಾಹಿತ್ಯ ಬಳಗದಲ್ಲಿ ರಾಜಕೀಯ ಪೋಸ್ಟ್ ಗಳನ್ನು ಹಾಕಿದಾಗ ಮತ್ತು ಕೃತಿಚೌರ್ಯಗಳು ಪತ್ತೆಯಾದಾಗ ಸಂಬಂಧಿಸಿದ ಬಳಗಗಳ ಎಲ್ಲಾ ಸದಸ್ಯರೂ ಇವುಗಳನ್ನು ವಿರೋಧಿಸಬೇಕು. ಸ್ಪರ್ಧೆಗಳ ತೀರ್ಪುಗಾರರು ಬಳಗಗಳಲ್ಲಿ ಇಲ್ಲದದವರಾಗಿದ್ದರೆ ಮಾತ್ರವೇ ಫಲಿತಾಂಶ ನಿಷ್ಪಕ್ಷಪಾತವಾಗಿ ಬರಲು ಸಾಧ್ಯ ಎಂದು ಶ್ರೀರಾಮ ದಿವಾಣ ತಿಳಿಸಿದರು. ಕೃತಿಚೌರ್ಯವನ್ನು ಪತ್ತೆಹಚ್ಚಿದವರನ್ನೇ ಬಳಗದಲ್ಲಿ ಟಾರ್ಗೆಟ್ ಮಾಡಿ ನಿಂದಿಸುವುದು, ಅಡ್ಮಿನ್ ಗಳೇ (ಎಲ್ಲರೂ ಅಲ್ಲ) ವಯುಕ್ತಿಕವಾಗಿ ಮೆಸೇಜ್ ಮಾಡಿ ಟೀಕಿಸುವುದು, ಮಾನಹಾನಿ, ತೇಜೋವಧೆ ಮಾಡುವಂಥ ಬರಹಗಳನ್ನು ಬಳಗಗಳಲ್ಲಿ ಬರೆದು ಅವಮಾನ ಮಾಡುವುದು, ಕೆಲವರು ಗುಂಪುಗಾರಿಕೆ ಮಾಡುವುದು ಇತ್ಯಾದಿ ನಡೆಯುತ್ತಿದೆ. ಇಂಥದ್ದೆಲ್ಲ ನಡೆಯುವುದು ಸಕಾರಾತ್ಮಕ ಬೆಳವಣಿಗೆಯಲ್ಲ ಎಂದು ರತ್ನಾ ಟಿ. ಕೆ. ಭಟ್ ತಿಳಿಸಿದರು. ತೀರ್ಪುಗಾರರೇ ಸ್ಪರ್ಧೆಯಲ್ಲಿನ ಸ್ಥಾನಗಳ ಆಯ್ಕೆಯಲ್ಲಾಗುತ್ತಿರುವ ಲೋಪಗಳಿಗೆ ಕಾರಣವೆಂದು ಈಶ್ವರ ಸಂಪಗಾವಿ ಹೇಳಿದರು. ಬಳಗಗಳಿಗೆ ಲಿಂಕ್ ಮೂಲಕ ಆಗಮಿಸುವ ಸದಸ್ಯರು ಬಳಗದವನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ, ಹೀಗಾಗಬಾರದು ಎಂದು ಸುಭಾಷಿಣಿಚಂದ್ರ ಅವರು ತಿಳಿಸಿದರೆ, ಬಳಗಗಳು ಹೆಚ್ಚುತ್ತಿರುವುದು ಮತ್ತು ಹೆಚ್ಚುತ್ತಿರುವ ಬಳಗಗಳಿಂದ ಗುಣಮಟ್ಟ ರಹಿತ ಸ್ಪರ್ಧೆಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವೆಂದರು ಕಾ. ವೀ. ಕೃಷ್ಣದಾಸ್ ಅವರು.

ಸುಭಾಷಿಣಿಚಂದ್ರ ಉಪ್ಪಳ ಪ್ರಾರ್ಥನಾಗೀತೆ ಹಾಡಿ, ಅಖಿಲ ಕರ್ನಾಟಕ ಬರಹಗಾರರ ವೇದಿಕೆಯ ಉಪಾಧ್ಯಕ್ಷರಾದ ಜನಾರ್ದನ ದುರ್ಗ ಸ್ವಾಗತಿಸಿ, ಸಹ ಕಾರ್ಯದರ್ಶಿ ಕೆ. ಪಿ. ಅಶ್ವಿನ್ ರಾವ್ ವಂದಿಸಿ, ಕಾರ್ಯದರ್ಶಿ ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.